ಸಾರ್ವಜನಿಕ ಸ್ಥಳದಲ್ಲಿ ಮೂತ್ರ ಮಾಡಿದ್ದನ್ನು ಆಕ್ಷೇಪಿಸಿದ ಇ-ರಿಕ್ಷಾ ಚಾಲಕನ ಕೊಲೆ: ಇಬ್ಬರ ಬಂಧನ

ಹೊಸದಿಲ್ಲಿ, ಜೂ.1: ಸಾರ್ವಜನಿಕ ಸ್ಥಳದಲ್ಲಿ ಮೂತ್ರಶಂಕೆ ಮಾಡಿದ್ದನ್ನು ವಿರೋಧಿಸಿದ ಇ-ರಿಕ್ಷಾ ಚಾಲಕನನ್ನು ಥಳಿಸಿಕೊಂದ ಪ್ರಕರಣದಲ್ಲಿ ದಿಲ್ಲಿಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಶನಿವಾರ ರಾತ್ರಿ ಇ-ರಿಕ್ಷಾ ಚಾಲಕನನ್ನು 15 ಮಂದಿಯ ಗುಂಪು ಹೊಡೆದು ಕೊಂದು ಹಾಕಿತ್ತು. ಪೊಲೀಸರಿಗೆ ಸಿಕ್ಕಿಬಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬ ಅಪ್ರಾಪ್ತ ವಯಸ್ಸಿನ ಬಾಲಕನಾಗಿದ್ದಾನೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.
ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು ಕೊಲೆಯಾದ ಯುವಕನ ಕುಟುಂಬವನ್ನು ಭೇಟಿಯಾಗಿ, 50,000 ರೂಪಾಯಿ ತುರ್ತು ಧನಸಹಾಯವನ್ನು ಒದಗಿಸಿದ್ದರು. ದಿಲ್ಲಿ ಸರಕಾರ ಐದು ಲಕ್ಷ ರೂಪಾಯಿ ಪರಿಹಾರಧನ ಘೋಷಿಸಿದೆ.
ಜೊತೆಗೆ , ಕೊಲ್ಲಲ್ಪಟ್ಟ ರವೀಂದ್ರಕುಮಾರ್‌ರ ಪತ್ನಿ ರಾಣಿಗೆ ಉತ್ತರ ದಿಲ್ಲಿ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ ಕೆಲಸ ನೀಡಲಾಗುವುದು. ಮೇಯರ್ ಪ್ರೀತಿ ಅಗ್ರವಾಲ್ ಕೆಲಸದ ಪತ್ರವನ್ನು ಹಸ್ತಾಂತರಿಸಿದ್ದಾರೆ. ಕ್ಲಾಸ್4 ಉದ್ಯೋಗಿಯಾಗಿ ರಾಣಿ ಅವರನ್ನು ಕಾರ್ಪೊರೇಷನ್ ನೇಮಕಗೊಳಿಸುತ್ತಿದೆ.





