ಬಹಿರಂಗವಾಗಿ ದನ ಕಡಿದ 8 ಮಂದಿ ಬಂಧನ

ಕಣ್ಣೂರ್,ಜೂನ್ 1: ಕೇಂದ್ರಸರಕಾರದ ಜಾನುವಾರು ಹತ್ಯೆ ನಿಷೇಧ ವಿಧೇಯಕವನ್ನು ಪ್ರತಿಭಟಿಸಿ ಬಹಿರಂಗವಾಗಿ ಜನರ ನಡುವೆ ಕರುವೊಂದನ್ನು ಕಡಿದು ಮಾಂಸ ಮಾಡಿದ ಪ್ರಕರಣದಲ್ಲಿ ಕಣ್ಣೂರ್ ಯುವ ಕಾಂಗ್ರೆಸ್ಸಿನ ನಾಯಕ ರಿಜಿಲ್ ಮಾಕುಟ್ಟಿ ಸಹಿತ ಎಂಟು ಮಂದಿಯನ್ನು ಕಣ್ಣೂರ್ ನಗರಪೊಲೀಸರು ಬಂಧಿಸಿದ್ದಾರೆ.
ಸಾಕುಪ್ರಾಣಿಗಳ ವಿರುದ್ಧ ಕ್ರೌರ್ಯ ತಡೆ, ಅಕ್ರಮವಾಗಿ ಗುಂಪುಗೂಡುವಿಕೆ ಮುಂತಾದ ಸೆಕ್ಷನ್ ಪ್ರಕಾರ ಯುವಕಾಂಗ್ರೆಸ್ಸಿಗರ ವಿರುದ್ಧ ಕೇಸು ದಾಖಲಿಸಿಕೊಳ್ಳಲಾಗಿದೆ. ಠಾಣೆಯಲ್ಲಿ ಜಾಮೀನು ನೀಡಬಹುದಾದ ಪ್ರಕರಣಗಳಿವು ಎಂದು ಮೂಲಗಳು ತಿಳಿಸಿವೆ. ಸಾರ್ವಜನಿಕರಿಗೆ ತೊಂದರೆಯಾಗುವಂತೆ ಕರುವಿನ ಹತ್ಯೆಗೈದಿದ್ದಾರೆ ಎಂದು ಯುವ ಮೋರ್ಚಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಕಣ್ಣೂರ್ ಸಿಟಿ ಪೊಲೀಸರು ಇವರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು.
ಬಹಿರಂಗ ವಾಗಿ ಗೋಹತ್ಯೆ ಮಾಡಿದ್ದು ರಾಷ್ಟ್ರೀಯ ಮಟ್ಟದಲ್ಲಿ ವಿವಾದಕ್ಕೆ ಆಸ್ಪದವಾಗಿದ್ದರಿಂದ ಕಣ್ಣೂರ್ ಯುವ ಕಾಂಗ್ರೆಸ್ ಅಧ್ಯಕ್ಷ ರಜಿಲ್ ಮಾಕುಟ್ಟಿ ಸಹಿತ ಮೂವರನ್ನು ಕಾಂಗ್ರೆಸ್‌ನಿಂದ ಅಮಾನತು ಗೊಳಿಸಲಾಗಿತ್ತು. ಜಾನುವಾರು ಸಾಗಾಟ ತಡೆಯೊಡ್ಡಿ ಕೇಂದ್ರ ಸರಕಾರ ಹೊರತಂದ ಅಧಿಸೂಚನೆಯನ್ನು ವಿರೋಧಿಸಿ ಇವರು ಕಣ್ಣೂರಿನ ಸಿಟಿ ಜಂಕ್ಷನ್‌ನಲ್ಲಿ ಕಾಂಗ್ರೆಸ್ ಜಿಲ್ಲಾಕಮಿಟಿಯ ನೇತೃತ್ವದಲ್ಲಿ ಕರುವನ್ನು ಕಡಿದು ಮಾಂಸವನ್ನುಉಚಿತವಾಗಿ ವಿತರಿಸಿದ್ದರು.





