ಯುಪಿಎಸ್ಸಿ ಸಾಧಕರ ಪಟ್ಟಿಯಲ್ಲಿ ಹೆಚ್ಚುತ್ತಿದೆ ಕಾಶ್ಮೀರಿಗಳ ಸಂಖ್ಯೆ

ಬಿಲಾಲ್ ಮೊಹಿಯುದ್ದೀನ್ ಭಟ್
ಶ್ರೀನಗರ,ಜೂ.1: 2016ರಲ್ಲಿ ನಡೆದಿದ್ದ ಯುಪಿಎಸ್ಸಿ ಪರೀಕ್ಷೆಯ ಫಲಿತಾಂಶ ನಿನ್ನೆಯಷ್ಟೇ ಪ್ರಕಟಗೊಂಡಿದೆ. ಈ ಬಾರಿ ಹಲವಾರು ಕಾಶ್ಮೀರಿಗಳು ತೇರ್ಗಡೆಗೊಳ್ಳುವಲ್ಲಿ ಯಶಸ್ವಿಯಾಗಿದ್ದು,ಕುಪ್ವಾರಾ ಜಿಲ್ಲೆಯ ಹರಿಪೋರ ಗ್ರಾಮದ ಬಿಲಾಲ್ ಮೊಹಿಯುದ್ದೀನ್ ಭಟ್(27) ಪರೀಕ್ಷೆಯಲ್ಲಿ 10ನೇ ರ್ಯಾಂಕ್ನ್ನು ಮುಡಿಗೇರಿಸಿಕೊಂಡಿದ್ದಾರೆ.
ಭಟ್ ಜೊತೆಗೆ ರಾಜ್ಯದ ಇತರ ಕನಿಷ್ಠ ಎಂಟು ಅಭ್ಯರ್ಥಿಗಳೂ ಯುಪಿಎಸ್ಸಿ ಪರೀಕ್ಷೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಝಾಫರ್ ಇಕ್ಬಾಲ್(39ನೇ ರ್ಯಾಂಕ್), ಸೈಯದ್ ಫಖ್ರುದ್ದೀನ್ ಹಮೀದ್(86ನೇ ರ್ಯಾಂಕ್), ಬಿಸ್ಮಾ ಖಾಝಿ(115ನೇ ರ್ಯಾಂಕ್), ಸುಹೈಲ್ ಖಾಸಿಂ ಮಿರ್(125ನೇ ರ್ಯಾಂಕ್), ಸಾಖಿಬ್ ಯೂಸುಫ್(472ನೇ ರ್ಯಾಂಕ್), ಫೈಸಲ್ ಜಾವೇದ್(610ನೇ ರ್ಯಾಂಕ್), ಇನಾಬತ್ ಖಾಲಿಕ್(604ನೇ ರ್ಯಾಂಕ್) ಮತ್ತು ಆಮಿರ್ ಬಶೀರ್(1087ನೇ ರ್ಯಾಂಕ್) ಇವರೂ ಭಟ್ ಜೊತೆಗೆ ಕಾಶ್ಮೀರಕ್ಕೆ ಹೆಮ್ಮೆಯನ್ನು ತಂದಿದ್ದಾರೆ.
ಭಟ್ ಭಾರತೀಯ ಅರಣ್ಯ ಸೇವೆ(ಐಎಫ್ಎಸ್) ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಕಾಶ್ಮೀರ ಕಣಿವೆಯ ಏಕೈಕ ಅಭ್ಯರ್ಥಿಯೂ ಹೌದು. ಯುಪಿಎಸ್ಸಿ ಐಎಫ್ಎಸ್ ಪರೀಕ್ಷೆಯ ಫಲಿತಾಂಶವನ್ನು ಎ.9ರಂದು ಪ್ರಕಟಿಸಿದ್ದು, ಆಯ್ಕೆಯಾದ 85 ಅಭ್ಯರ್ಥಿಗಳ ಪೈಕಿ ಭಟ್ 23ನೇ ರ್ಯಾಂಕ್ ಗಳಿಸಿದ್ದರು. ಇದಕ್ಕೂ ಮುನ್ನ ಅವರು ಕಾಶ್ಮೀರ ಆಡಳಿತ ಸೇವೆ (ಕೆಎಎಸ್) ಪರೀಕ್ಷೆಯಲ್ಲಿಯೂ ತೇರ್ಗಡೆಗೊಂಡಿದ್ದರು. ಆದರೆ ಅವರ ಕನಸು ಐಎಎಸ್ ಆಗಿತ್ತು ಮತ್ತು ಅದು ಇದೀಗ ನನಸಾಗಿದೆ.
ಹಾಲಿ ಶ್ರೀನಗರದ ಬೆಮಿನಾ ನಿವಾಸಿಯಾಗಿರುವ ಭಟ್ 3ನೇ ತರಗತಿಯವರೆಗೆ ಕುಪ್ವಾರಾದಲ್ಲಿಯೇ ಓದಿದ್ದು, ಮುಂದಿನ ಶಿಕ್ಷಣ ಶ್ರೀನಗರದಲ್ಲಿ ನಡೆದಿತ್ತು. 2005ರಲ್ಲಿ ಜಮ್ಮುವಿನ ಶೇರ್-ಎ-ಕಾಶ್ಮೀರ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿವಿಯಲ್ಲಿ ಬಿವಿಎಸ್ಸಿ ಕೋರ್ಸ್ಗೆ ಪ್ರವೇಶ ಪಡೆದಿದ್ದರು.
ಭಟ್ ಅವರ ತಂದೆ ಗುಲಾಂ ಮೊಹಿಯುದ್ದೀನ್ ಭಟ್ ಹಿರಿಯ ಕೆಎಎಸ್ ಅಧಿಕಾರಿಯಾಗಿದ್ದಾರೆ. ಮೂವರು ಸೋದರರು ಮತ್ತು ಓರ್ವ ಸೋದರಿ ರಾಜ್ಯ ಸರಕಾರದ ಹಿರಿಯ ಹುದ್ದೆಗಳಲ್ಲಿದ್ದಾರೆ.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಭಟ್,‘‘ನನ್ನ ಭಾವನೆಗಳನ್ನು ಬಣ್ಣಿಸಲು ಶಬ್ಧಗಳು ಸಾಲುತ್ತಿಲ್ಲ. ನಾನಿಂದು ಜಗತ್ತಿನ ತುತ್ತತುದಿಯಲ್ಲಿ ಇದ್ದೇನೆಂಬ ಭಾವನೆ ಮೂಡಿದೆ. ‘ಮತ್ತೆ ಮತ್ತೆ ಪ್ರಯತ್ನಿಸು’ಎಂಬ ಮಾತಿನಲ್ಲಿ ನಾನು ನಂಬಿಕೆ ಹೊಂದಿದ್ದೇನೆ. 2010ರಿಂದಲೂ ನಾನು ಪ್ರಯತ್ನಗಳನ್ನು ಮಾಡುತ್ತಿದ್ದೆ ’’ಎಂದು ಸಂಭ್ರಮವನ್ನು ಹಂಚಿಕೊಂಡರು.
ತನಗೆ ತವರು ಕೇಡರ್ ದೊರೆಯುತ್ತದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ ಅವರು, ತನ್ನ ಗುರಿಯನ್ನು ಸಾಧಿಸಲು ತಾನು ಪ್ರತಿಯೊಂದೂ ಸುಖವನ್ನು ತ್ಯಾಗ ಮಾಡಿದ್ದೆ ಎಂದರು. ಭಟ್ಗೆ ಅಭಿನಂದನಾ ಸಂದೇಶಗಳು ಒಂದೇ ಸಮನೆ ಹರಿದುಬರುತ್ತಿವೆ. ಉಗ್ರವಾದ ಪೀಡಿತ ಪ್ರದೇಶಗಳ ಯುವಜನರು ಸಿವಿಲ್ ಸರ್ವಿಸ್ ಪರೀಕ್ಷೆಗಳಿಗೆ ಹಾಜರಾ ಗುತ್ತಿರುವುದು ಮತ್ತು ಉನ್ನತ ರ್ಯಾಂಕ್ಗಳೊಂದಿಗೆ ತೇರ್ಗಡೆಗೊಳ್ಳುತ್ತಿರುವುದು ಉತ್ತೇಜಕ ವಿಷಯವಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದರೆ, ಭಟ್ ರಾಜ್ಯಕ್ಕೆ ಹೆಮ್ಮೆಯನ್ನುಂಟು ಮಾಡಿದ್ದಾರೆ ಎಂದಿರುವ ಮಾಜಿ ಮುಖ್ಯಮಂತ್ರಿ ಉಮರ್ ಶರೀಫ್ ಅವರು,‘ಕಾಶ್ಮೀರದ ಈ ಸುಪುತ್ರನ ಎಲ್ಲ ಕನಸುಗಳು ಈಡೇರಲಿ’ ಎಂದು ಆಶಯ ವ್ಯಕ್ತಪಡಿಸಿದ್ದಾರೆ.
ಬಿಸ್ಮಾ ಖಾಝಿ
ಶ್ರೀನಗರದ ರಾಮಬಾಗ್ ನಿವಾಸಿಯಾಗಿರುವ ಬಿಸ್ಮಾ ಖಾಝಿ ಕಾಶ್ಮೀರ ವಿವಿಯ ಇಂಜಿನಿಯರಿಂಗ್ ಪದವೀಧರೆಯಾಗಿದ್ದು, ತಾನೆಂದೂ ಕೋಚಿಂಗ್ಗೆ ಹೋಗಿರಲಿಲ್ಲ. 2014ರಲ್ಲಿ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿದಾಗಲೇ ಯುಪಿಎಸ್ಸಿ ಪರೀಕ್ಷೆಯನ್ನು ಭೇದಿಸಬೇಕೆಂಬ ದೃಢ ನಿರ್ಧಾರವನ್ನು ಮಾಡಿದ್ದೆ ಎಂದು ಹೇಳಿದರು.
ಸುಹೈಲ್ ಖಾಸಿಂ ಮಿರ್
ಅನಂತನಾಗ್ ಜಿಲ್ಲೆಯ ಸಿರ್ಹಾಮಾ ಗ್ರಾಮದ ನಿವಾಸಿಯಾಗಿರುವ ಸುಹೈಲ್ ತನ್ನ ಯಶಸ್ಸನ್ನು ಪೊಲೀಸ್ ಅಧಿಕಾರಿಯಾಗಿರುವ ತಂದೆಗೆ ಅರ್ಪಿಸಿದ್ದಾರೆ. ಸರಕಾರಿ ಅಧಿಕಾರಿಗಳ ಹುದ್ದೆಗಿರುವ ಗೌರವ ಮೊದಲಿನಿಂದಲೂ ತನಗೆ ಆಕರ್ಷಣೆಯಾಗಿತ್ತು ಮತ್ತು ತಾನು ಅಂತಹುದೇ ಹುದ್ದೆಯನ್ನು ಬಯಸಿದ್ದೆ ಎಂದು ಹೇಳಿದರು. ಅವರು ದಿಲ್ಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾದಲ್ಲಿ ಪಿಎಚ್ಡಿ ವಿದ್ಯಾರ್ಥಿಯಾಗಿದ್ದು, ತನ್ನ ಎಂಬಿಎ ಪದವಿಯನ್ನೂ ಅಲ್ಲಿಯೇ ಪಡೆದಿದ್ದರು.
ಝಾಫರ್ ಇಕ್ಬಾಲ್ ಪೂಂಛ್ನವರಾಗಿದ್ದರೆ, ಇನಾಬತ್ ರಾಜೌರಿಯವರಾಗಿದ್ದಾರೆ. ಇಬ್ಬರೂ ಗುಜ್ಜರ್ ಸಮುದಾಯಕ್ಕೆ ಸೇರಿದ್ದಾರೆ.
ಯುಪಿಎಸ್ಸಿ ಪರೀಕ್ಷೆಯಲ್ಲಿ ಕರ್ನಾಟಕದ ನಂದಿನಿ ಕೆ.ಆರ್.ಮೊದಲ ರ್ಯಾಂಕ್ ಪಡೆದಿದ್ದಾರೆ. ಒಟ್ಟು 1,099 ಯಶಸ್ವಿ ಅಭ್ಯರ್ಥಿಗಳನ್ನು ವಿವಿಧ ಸರಕಾರಿ ಸೇವೆಗಳಿಗೆ ಶಿಫಾರಸು ಮಾಡಲಾಗಿದ್ದು, ಇತರ 220 ಅಭ್ಯರ್ಥಿಗಳು ವೇಟಿಂಗ್ ಲಿಸ್ಟ್ನಲ್ಲಿದ್ದಾರೆ.







