ಜೂ. 3: ಮೈಸೂರಿನಲ್ಲಿ ಸವಲತ್ತು ವಿತರಣಾ ಸಂಭ್ರಮ: ಸಚಿವ ಯು.ಟಿ.ಖಾದರ್

ಚಾಮರಾಜನಗರ, ಜೂ.1: ಸರ್ಕಾರದ ವತಿಯಿಂದ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳ ಪ್ರಯೋಜನ ಪಡೆದಿರುವ ಫಲಾನುಭವಿಗಳ ಸಮಾವೇಶ ಹಾಗೂ ಸವಲತ್ತು ವಿತರಣಾ ಕಾರ್ಯಕ್ರಮವನ್ನು ಜೂ. 3 ರಂದು ಮೈಸೂರಿನಲ್ಲಿ ಆಯೋಜಿಸಿದ್ದು, ಜಿಲ್ಲೆಯಿಂದಲೂ ಸಾಕಷ್ಟು ಸಂಖ್ಯೆಯಲ್ಲಿ ಫಲಾನುಭವಿಗಳು ಭಾಗವಹಿಸಲಿದ್ದಾರೆಂದು ಆಹಾರ, ನಾಗರೀಕ ಪೂರೈಕೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ತಿಳಿಸಿದರು.
ನಗರದ ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸಭಾಂಗಣದಲ್ಲಿಂದು ಪತ್ರಿಕಾ ಗೋಷ್ಠಿಯಲ್ಲಿ ವಿವರ ನೀಡಿದ ಸಚಿವರು, ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ಪ್ರಯೋಜನ ಪಡೆದ ಫಲಾನುಭವಿಗಳು ಇದ್ದಾರೆ. ಅಲ್ಲದೇ ಪ್ರಸಕ್ತ ಸಾಲಿನಲ್ಲಿ ಸೌಲಭ್ಯ ಪಡೆಯುವ ಫಲಾನುಭವಿಗಳನ್ನು ಸಹ ಗುರುತಿಸಲಾಗಿದೆ. ಫಲಾನುಭವಿಗಳಿಗೆ ಸವಲತ್ತು ವಿತರಿಸುವ ಕಾರ್ಯಕ್ರಮವು ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಜೂನ್ 3 ರಂದು ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಫಲಾನುಭವಿಗಳು ಬರಲಿದ್ದಾರೆ ಎಂದರು.
ಕೊಟ್ಟ ಮಾತು ದಿಟ್ಟ ಸಾಧನೆ ಎಂಬ ಘೋಷಣೆಯಡಿ ಫಲಾನುಭವಿಗಳಿಗೆ ಸವಲತ್ತು ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಮುಖ್ಯಮಂತ್ರಿಯವರೇ ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸುವರು. ಮೈಸೂರು ವಿಭಾಗಕ್ಕೆ ಒಳಪಡುವ ಎಲ್ಲಾ ಜಿಲ್ಲೆಗಳ ಹೆಚ್ಚು ಸಂಖ್ಯೆಯ ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಸಚಿವರು ತಿಳಿಸಿದರು.
ಜಿಲ್ಲೆಯಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳಿಗೆ ಬಿತ್ತನೆಬೀಜ, ಗೊಬ್ಬರ ಇತರೆ ಅಗತ್ಯ ವಸ್ತುಗಳನ್ನು ಪೂರೈಸಲು ಸೂಚಿಸಲಾಗಿದೆ. ಜನರು ಯಾವುದೇ ತೊಂದರೆಗೆ ಒಳಗಾಗದಂತೆ ಸ್ಥಳೀಯ ಸಂಸ್ಥೆಗಳು ನೋಡಿಕೊಳ್ಳುವ ಮುನ್ನೆಚ್ಚೆರಿಕೆಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಿರ್ದೇಶನ ನೀಡಲಾಗಿದೆ ಎಂದರು.
ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಲು ಗಡುವು ನೀಡಲಾಗಿದೆ ಎಂದು ಸಚಿವರು ತಿಳಿಸಿದರು.
ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎಸ್.ಜಯಣ್ಣ, ಜಿಲ್ಲಾ ಪಂ. ಅಧ್ಯಕ್ಷ ಎಂ.ರಾಮಚಂದ್ರ, ಉಪಾಧ್ಯಕ್ಷ ಬಸವರಾಜು, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಎಚ್.ವಿ.ಚಂದ್ರು, ಚೂಡಾ ಅಧ್ಯಕ್ಷ ಸುಹೇಲ್ ಆಲಿ ಖಾನ್, ಜಿ.ಪಂ.ಸ್ಥಾಯಿ ಸಮಿತಿ ಅಧ್ಯಕ್ಷ ಕೆರೆಹಳ್ಳಿ ನವೀನ್, ಜಿಲ್ಲಾಧಿಕಾರಿ ಬಿ.ರಾಮು, ಜಿ.ಪಂ.ಸಿ.ಇ.ಒ, ಡಾ. ಕೆ.ಹರೀಶ್ ಕುಮಾರ್ ಇತರರು ಹಾಜರಿದ್ದರು.







