ಸುರತ್ಕಲ್ ಮಾರುಕಟ್ಟೆ ಸಮುಚ್ಚಯಕ್ಕೆ 50 ಕೋ.ರೂ. ಮಂಜೂರು: ಮೊಯ್ದಿನ್ ಬಾವ

ಮಂಗಳೂರು, ಜೂ.1: ಸುರತ್ಕಲ್ ನೂತನ ಮಾರುಕಟ್ಟೆ ಸಮುಚ್ಚಯಕ್ಕೆ 120 ಕೋ.ರೂ.ಗಳ ಅಂದಾಜು ಪಟ್ಟಿ ತಯಾರಿಸಲಾಗಿದ್ದು, ಮೊದಲ ಹಂತದ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶೇಷ ಅನುದಾನದಡಿ 50 ಕೋ.ರೂ. ಮಂಜೂರು ಮಾಡಿದ್ದಾರೆ ಎಂದು ಶಾಸಕ ಮೊಯ್ದಿನ್ ಬಾವ ಹೇಳಿದರು.
ನಗರದ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಯಾವುದೇ ನಗರ ಪಾಲಿಕೆಗೆ ಮುಖ್ಯಮಂತ್ರಿ ಇಷ್ಟು ದೊಡ್ಡ ಮೊತ್ತದ ಅನುದಾನವನ್ನು ಮಾರುಕಟ್ಟೆ ಸಮುಚ್ಚಯಕ್ಕೆ ಮಂಜೂರು ಮಾಡಿಲ್ಲ. ಉಳಿದ ಪಾಲಿಕೆಗಳು ಕೆಯುಐಡಿಎಫ್‌ಸಿ ಅಥವಾ ಇತರ ಸಂಸ್ಥೆಗಳಿಂದ ಸಾಲ ಪಡೆದು ಕಟ್ಟಡ ನಿರ್ಮಿಸುತ್ತಾರೆ. ಆದರೆ ಸುರತ್ಕಲ್‌ನಲ್ಲಿ ಸಾಲದ ಬಾಧ್ಯತೆಗಳಿಲ್ಲದೆ ಮಾರುಕಟ್ಟೆ ನಿರ್ಮಾಣಗೊಳ್ಳಲಿದೆ. ಎರಡು ಹಂತದಲ್ಲಿ ಕಾಮಗಾರಿ ನಡೆಸಲು ಉದ್ದೇಶಿಸಲಾಗಿದೆ. ಮೊದಲ ಹಂತದಲ್ಲಿ 61 ಕೋಟಿ ರೂ.ಗಳ ಕಾಮಗಾರಿ ನಡೆಸಲಾಗುವುದು. ಈ ಹಿಂದೆ ಮಾಜಿ ಸಚಿವ ಜೆ.ಕೃಷ್ಣ ಪಾಲೆಮಾರ್ ಮಾರುಕಟ್ಟೆಗೆ ದೊಡ್ಡ ಮೊತ್ತದ ಅನುದಾನ ನೀಡಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಇದೀಗ ಮುಖ್ಯಮಂತ್ರಿ ಅವರೇ ಆದೇಶ ನೀಡಿದ್ದು, ಪಾಲೆಮಾರ್ ಅವರ ಮಾತು ಹುಸಿಯಾಗಿದೆ ಎಂದು ಮೊಯ್ದಿನ್ ಬಾವ ಹೇಳಿದರು.
ಪಾಲಿಕೆಯ ಸುರತ್ಕಲ್ ವಲಯ ಕಚೇರಿ ನಿರ್ಮಾಣದ ಬಗ್ಗೆ ಈಗಾಗಲೇ 2.25 ಕೋ.ರೂ.ಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದಿದ್ದು, 15 ದಿನಗಳೊಳಗೆ ಕಾಮಗಾರಿಗೆ ಚಾಲನೆ ನೀಡಲಾಗುವುದು. ಸುರತ್ಕಲ್ ಸರಕಾರಿ ಆಸ್ಪತ್ರೆಯನ್ನು 30 ಹಾಸಿಗೆಗಳ ಆಸ್ಪತ್ರೆಯಾಗಿ ಉನ್ನತೀಕರಣಗೊಳಿಸುವ ಯೋಜನೆಗೆ 5 ಕೋ.ರೂ.ಗಳ ಅಂದಾಜು ಪಟ್ಟಿ ತಯಾರಿಸಲಾಗಿದೆ. ಯೋಜನೆಗೆ ಎಂಎಆರ್‌ಪಿಎಲ್ ಹಾಗೂ ಎನ್‌ಎಂಪಿಟಿ ಕಂಪನಿಗಳು ಸಿಎಸ್‌ಆರ್ ಅನುದಾನದಿಂದ 1 ಕೋ.ರೂ ಅನುದಾನ ನೀಡಲು ಒಪ್ಪಿಕೊಂಡಿದೆ. ಮುಂದಿನ ತಿಂಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ಮಾಡಲಿದ್ದಾರೆ ಎಂದು ವೊಯ್ದಿನ್ ಬಾವಾ ತಿಳಿಸಿದರು.







