ಕೇವಲ 5,000 ಕೋಟಿ ರೂ. ಸಂಗ್ರಹ ಕಾಳಧನ ಮುಕ್ತಿ ಯೋಜನೆಗೆ ನೀರಸ ಪ್ರತಿಕ್ರಿಯೆ

ಹೊಸದಿಲ್ಲಿ, ಜೂ.1: ಕಾಳಧನದಿಂದ ಮುಕ್ತಿ ಹೊಂದುವ ‘ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಯೋಜನೆ’ಗೆ ಜನರಿಂದ ನಿರೀಕ್ಷಿತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.ಈ ಯೋಜನೆಯಡಿ ಕೇವಲ 5,000 ಕೋಟಿ ರೂ. ಮೊತ್ತದ ಲೆಕ್ಕ ಕೊಡದ ಮೊತ್ತವನ್ನು ಘೋಷಿಸಲಾಗಿದೆ ಎಂದು ಸರಕಾರ ತಿಳಿಸಿದೆ. ಕಪ್ಪು ಹಣ ಹೊಂದಿರುವವರು ಶೇ.50ರಷ್ಟು ತೆರಿಗೆ ಮತ್ತು ದಂಡ ಪಾವತಿಸಿ ಈ ಹಣವನ್ನು ಅಧಿಕೃತಗೊಳಿಸುವ ‘ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ ಯೋಜನೆ’(ಪಿಎಂಜಿಕೆವೈ) ಯೋಜನೆಯನ್ನು ಕಳೆದ ಡಿಸೆಂಬರ್‌ನಲ್ಲಿ ಘೋಷಿಸಲಾಗಿತ್ತು.
ಯೋಜನೆ ನಿರೀಕ್ಷಿಸಿದಷ್ಟು ಯಶಸ್ಸು ಕಾಣದಿರಲು ಎರಡು ಕಾರಣವಿದೆ. ಈ ಯೋಜನೆ ಘೋಷಣೆಗೂ ಮೊದಲೇ ಜನರು ತಮ್ಮಲ್ಲಿದ್ದ ಹಣವನ್ನು ವಿವಿಧ ಖಾತೆಯಲ್ಲಿ ಸೇರಿಸಿದ್ದರು. ಅಲ್ಲದೆ, ತೆರಿಗೆ ಮತ್ತು ದಂಡದ ಪ್ರಮಾಣ ಅಧಿಕವಾಗಿರುವುದು ಈ ಎರಡು ಕಾರಣಗಳಾಗಿವೆ ಎಂದು ಕಂದಾಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಸುದ್ದಿಗಾರರಿಗೆ ತಿಳಿಸಿದರು.
ಈ ಯೋಜನೆಯನ್ನು ಪ್ರತ್ಯೇಕವಾಗಿ ಪರಿಗಣಿಸಬಾರದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ಪಿಎಂಜಿಕೆವೈ ಯೋಜನೆಗೂ ಮುನ್ನ ಇದೇ ರೀತಿಯ ಹಲವು ಯೋಜನೆಗಳಿದ್ದವು. ಐಡಿಎಸ್ ಯೋಜನೆ ಇದರಲ್ಲಿ ಒಂದಾಗಿದೆ. ಆ ಬಳಿಕ ತೆರಿಗೆ ಪಾವತಿಸಿ ಬ್ಯಾಂಕ್ ಖಾತೆಯಲ್ಲಿ ಹಣ ಜಮೆ ಮಾಡಲು ಅವಕಾಶ ನೀಡಲಾಯಿತು. ಈ ಎಲ್ಲಾ ಯೋಜನೆಗಳ ಫಲಿತಾಂಶವನ್ನು ಕೂಡಿಸಿ ನೋಡಬೇಕು ಎಂದು ಅವರು ಹೇಳಿದರು. ಕಾಳಧನದ ವಿರುದ್ಧದ ಸರಕಾರದ ಕಾರ್ಯಾಚರಣೆ ಮುಂದುವರಿಯಲಿದೆ ಎಂದವರು ಇದೇ ಸಂದರ್ಭ ಸ್ಪಷ್ಟಪಡಿಸಿದರು.
2016ರ ಜೂನ್‌ನಿಂದ ಸೆಪ್ಟೆಂಬರ್ ಅವಧಿಯಲ್ಲಿ ಆದಾಯ ಹೊರಗೆಡಹುವ ಯೋಜನೆ(ಐಡಿಎಸ್)ಯಡಿ 67,382 ಕೋಟಿ ರೂ. ಮೊತ್ತದ ಅಕ್ರಮ ಸಂಪತ್ತನ್ನು ಘೋಷಿಸಲಾಗಿತ್ತು. ಕಾಳಧನವನ್ನು ಸಕ್ರಮಗೊಳಿಸಲು ಕಡೆಯ ಅವಕಾಶ ನೀಡಿದ್ದ ಕೇಂದ್ರ ಸರಕಾರ ಪಿಎಂಜಿಕೆವೈ ಯೋಜನೆ ಜಾರಿಗೊಳಿಸಿದ್ದು ಇದು ಕಳೆದ ಡಿಸೆಂಬರ್‌ನಿಂದ ಮಾರ್ಚ್ ಅಂತ್ಯದವರೆಗೆ ಜಾರಿಯಲ್ಲಿತ್ತು.







