ಬಾಂಗ್ಲಾ: ನಾಪತ್ತೆಯಾಗಿರುವ 81 ಮೀನುಗಾರರಿಗಾಗಿ ಶೋಧ

ಢಾಕಾ, ಜೂ. 1: ವಿನಾಶಕಾರಿ ಚಂಡಮಾರುತದ ಬಳಿಕ ನಾಪತ್ತೆಯಾಗಿರುವ 81 ಮೀನುಗಾರರಿಗಾಗಿ ಬಾಂಗ್ಲಾದೇಶದ ನೌಕಾಪಡೆ ಬಂಗಾಳಕೊಲ್ಲಿಯಲ್ಲಿ ಗುರುವಾರ ಶೋಧ ಕಾರ್ಯಾಚರಣೆ ನಡೆಸುತ್ತಿದೆ.
ಇದಕ್ಕೂ ಮೊದಲು ಸುಮಾರು 63 ಮೀನುಗಾರರನ್ನು ರಕ್ಷಿಸಲಾಗಿತ್ತು.
‘‘144 ಮೀನುಗಾರರ ಪೈಕಿ 81 ಮಂದಿ ಈಗಲೂ ನಾಪತ್ತೆಯಾಗಿದ್ದಾರೆ. ಈಗಾಗಲೇ ಬಾಂಗ್ಲಾದೇಶ ನೌಕಾಪಡೆ 33 ಮತ್ತು ಭಾರತೀಯ ನೌಕಾಪಡೆ 30 ಮೀನುಗಾರರನ್ನು ರಕ್ಷಿಸಿದೆ’’ ಎಂದು ಕಾಕ್ಸ್ ಬಝಾರ್ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳ ಮಾಲೀಕರ ಸಂಘದ ಮುಖ್ಯಸ್ಥ ಮುಶ್ತಾಕ್ ಅಹ್ಮದ್ ತಿಳಿಸಿದರು.
‘ಮೊರ’ ಚಂಡಮಾರುತವು ಗಂಟೆಗೆ 135 ಕಿ.ಮೀ. ವೇಗದ ಬಿರುಗಾಳಿ ಮತ್ತು ಭಾರೀ ಮಳೆಯೊಂದಿಗೆ ಬಾಂಗ್ಲಾದೇಶದ ಆಗ್ನೇಯ ಕರಾವಳಿ ತೀರಕ್ಕೆ ಮಂಗಳವಾರ ಅಪ್ಪಳಿಸಿತ್ತು. ಕಾಕ್ಸ್ ಬಝಾರ್ ಜಿಲ್ಲೆ ಮತ್ತು ನೆರೆಯ ಮ್ಯಾನ್ಮಾರ್‌ನೊಂದಿಗಿನ ಗಡಿ ಪ್ರದೇಶ ಅತ್ಯಂತ ಬಾಧೆಗೆ ಒಳಗಾದ ಪ್ರದೇಶಗಳಾಗಿವೆ.
ಗಡಿ ಭಾಗದಲ್ಲಿರುವ ನಿರಾಶ್ರಿತ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಸಾವಿರಾರು ರೊಹಿಂಗ್ಯ ಮುಸ್ಲಿಮ್ ನಿರಾಶ್ರಿತರು ತೀರಾ ಸಂಕಷ್ಟಕ್ಕೊಳಗಾಗಿದ್ದಾರೆ.
‘‘ಬೆಸ್ತರ ರಕ್ಷಣೆಯಾಗಿದ್ದರೂ ಹೆಚ್ಚಿನ ದೋಣಿಗಳು ಹಾಗೂ ನಮ್ಮ ಜೀವನೋಪಾಯದ ಪ್ರಧಾನ ಸಲಕರಣೆಗಳು ಸಂಪೂರ್ಣವಾಗಿ ನಾಶವಾಗಿವೆ’’ ಎಂದು ಅಹ್ಮದ್ ಹೇಳಿದರು.







