ಮೂತ್ರಶಂಕೆಗೆ ಹೋದವನ ತಲೆಗೆ ಗುಂಡು!

ಹೊಸದಿಲ್ಲಿ, ಜೂ.1: ಸೂರಜ್ ಪ್ರಕಾಶ್ ಶರ್ಮಾ ಹಾಗೂ ಆತನ ಸಹೋದರ ಮೂತ್ರಶಂಕೆಗಾಗಿ ಮಧ್ಯರಾತ್ರಿಯ ವೇಳೆ ಮನೆಯಿಂದ ಹೊರಗೆ ತೆರಳಿದ್ದರು. ಪ್ರಶಾಂತವಾಗಿದ್ದ ವಾತಾವರಣದಲ್ಲಿ ಏಕಾಏಕಿ ಜೋರಾದ ಶಬ್ಧವೊಂದು ಕೇಳಿಬಂತು. ಇದೇ ಸಂದರ್ಭ ಸೂರಜ್ ಕುಸಿದುಬಿದ್ದಿದ್ದರು, ಅವರ ತಲೆಯ ಹಿಂಭಾಗದಿಂದ ರಕ್ತ ಸುರಿಯುತ್ತಿತ್ತು. ಕೂಡಲೇ ಸೂರಜ್ ರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ನೀಡಿ ಮರುದಿನ ಎಕ್ಸ್ ರೇ ತೆಗೆಯುವಂತೆ ಹೇಳಿದ್ದರು.
ಇದಾಗಿ ಮನೆಗೆ ತೆರಳಿದ ಸೂರಜ್ ವಿಪರೀತ ತಲೆನೋವಿನಿಂದ ಚಡಪಡಿಸಿದ ಹಿನ್ನೆಲೆಯಲ್ಲಿ ಮತ್ತೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸೂರಜ್ ರ ಎಕ್ಸ್ ರೇ ನಡೆಸಿದ ವೈದ್ಯರು ಒಮ್ಮೆ ಬೆಚ್ಚಿಬಿದ್ದಿದ್ದರು. ಕಾರಣ ಸೂರಜ್ ರ ತಲೆಯೊಳಗೆ ಬುಲೆಟೊಂದು ಸಿಕ್ಕಿಕೊಂಡಿತ್ತು. ಸುಮಾರು 15 ಗಂಟೆಗಳ ಕಾಲ ತಲೆಯೊಳಗೆ ಬುಲೆಟ್ ಇದ್ದರೂ ಯಾವುದೇ ಅಪಾಯ ಸಂಭವಿಸಿರಲಿಲ್ಲ.
“ಏನು ಸಂಭವಿಸಿತ್ತೆಂದು ನಮಗ್ಯಾರಿಗೂ ತಿಳಿದಿರಲಿಲ್ಲ. ತಕ್ಷಣವೇ ಸೂರಜ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿನ ವೈದ್ಯರು ಗಾಯಕ್ಕೆ ಮದ್ದು ನೀಡಿ ಮರುದಿವಸ ಬರುವಂತೆ ಹೇಳಿದ್ದರು” ಎನ್ನುತ್ತಾರೆ ಸಹೋದರ ನೀರಜ್.
ಸುಮಾರು 1.5 ಸೆಂಟಿ ಮೀಟರ್ ನ ಬುಲೆಟ್ ಬೆನ್ನುಮೂಳೆಯ ಮೇಲ್ಬಾಗದಲ್ಲಿರುವುದು ಸ್ಕ್ಯಾನ್ ನಿಂದ ತಿಳಿದುಬಂದಿತ್ತು. 7 ಮಂದಿ ವೈದ್ಯರ ತಂಡ ನಾಲ್ಕು ಗಂಟೆಗಳ ಶಸ್ತ್ರಚಿಕಿತ್ಸೆ ನಡೆಸಿ ಬುಲೆಟನ್ನು ಹೊರತೆಗೆದಿದೆ.
“ಸೂರಜ್ ನಿಜವಾಗಿಯೂ ಅದೃಷ್ಟವಂತ. ತಲೆಬುರುಡೆಯ ಹಿಂಭಾಗದಿಂದ ಬುಲೆಟ್ ನುಗ್ಗಿದ್ದು, ರಕ್ತದೊತ್ತಡ ಹಾಗೂ ಉಸಿರಾಟ ನಿರ್ವಹಿಸುವ ಪ್ರದೇಶಗಳಿಂದ ಹಾದುಹೋಗಿತ್ತು. ಸೂರಜ್ ರ ಸದ್ಯದ ಆರೋಗ್ಯ ಸ್ಥಿತಿಗಾಗಿ ಆತನಿಗೆ ಪ್ರಜ್ಞೆ ಬರುವವರೆಗೆ ಕಾಯಬೇಕು” ಎಂದು ಡಾ.ಸುಬೋದ್ ಕುಮಾರ್ ಗುಪ್ತಾ ಹೇಳಿದ್ದಾರೆ.
ಗುಂಡು ಹೊಡೆದವರು ಯಾರು ಎನ್ನುವುದು ಇನ್ನೂ ತಿಳಿದುಬಂದಿಲ್ಲ. ಪ್ರಕರಣದ ಬಗ್ಗೆ ನಿಹಾಲ್ ವಿಹಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







