ಕುವೈತ್: ಅಂಗವಿಕಲ ಬಾಲಕನನ್ನು ಅಪಹರಿಸಿ ಅತ್ಯಾಚಾರ; 7 ಮಂದಿಗೆ ಮರಣದಂಡನೆ

ಕುವೈತ್ ಸಿಟಿ, ಜೂ. 1: 13 ವರ್ಷದ ಅಂಗವಿಕಲ ಬಾಲಕನೊಬ್ಬನನ್ನು ಅಪಹರಿಸಿ ಅತ್ಯಾಚಾರಗೈದ ಪ್ರಕರಣದಲ್ಲಿ ಕುವೈತ್‌ನ ಮೇಲ್ಮನವಿ ನ್ಯಾಯಾಲಯವೊಂದು ಬುಧವಾರ ಏಳು ಯುವಕರಿಗೆ ಮರಣ ದಂಡನೆ ವಿಧಿಸಿದೆ.
ಕೆಳ ನ್ಯಾಯಾಲಯವೊಂದು ಎಪ್ರಿಲ್‌ನಲ್ಲಿ ಅಪರಾಧಿಗಳಿಗೆ ವಿಧಿಸಿದ್ದ 10 ವರ್ಷದ ಜೈಲು ಶಿಕ್ಷೆಯನ್ನು ನ್ಯಾಯಾಲಯ ಬದಿಗೊತ್ತಿತು ಎಂದು ಸಂತ್ರಸ್ತ ಪರ ವಕೀಲ ಇಬ್ರಾಹೀಮ್ ಅಲ್-ಬತನಿ ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದರು.
18ರಿಂದ 23 ವರ್ಷದ ಅಪರಾಧಿಗಳು ಕಳೆದ ವರ್ಷದ ಸೆಪ್ಟಂಬರ್‌ನಲ್ಲಿ ಬಾಲಕನನ್ನು ಅಪಹರಿಸಿ ಆತನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂಬುದಾಗಿ ಆರೋಪಿಸಲಾಗಿತ್ತು.
ಬಾಲಕನು ಕುವೈತ್ ಪ್ರಜೆಯಾಗಿದ್ದು ಆಂಶಿಕ ಮಾನಸಿಕ ಅಸ್ಥಿರತೆಯಿಂದ ಬಳಲುತ್ತಿದ್ದಾನೆ.
ಅಪರಾಧಿಗಳ ಪೈಕಿ ನಾಲ್ವರು ಕುವೈತಿಗಳು, ಓರ್ವ ಯಮನಿ, ಓರ್ವ ಇರಾಕಿ ಮತ್ತು ಇನ್ನೋರ್ವನಿಗೆ ದೇಶವಿಲ್ಲ. ಅಪರಾಧಿಗಳು ತಮ್ಮ ಕೃತ್ಯವನ್ನು ಚಿತ್ರೀಕರಿಸಿಕೊಂಡಿದ್ದು, ಬಾಲಕ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಸಾಮಾಜಿಕ ತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.





