ಜಿಎಸ್‌ಟಿ ಸೇವಾ ಕೇಂದ್ರ ಉದ್ಘಾಟನೆ

ಮಂಗಳೂರು, ಜೂ. 1: ದೇಶದಲ್ಲಿ ಸಮರ್ಪಕವಾಗಿ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ ಅನುಷ್ಠಾನಗೊಂಡರೆ ಆದಾಯ ಹೆಚ್ಚಾಗಲಿದ್ದು, ಇದರಿಂದ ಜಿಡಿಪಿ (ಅಭಿವೃದ್ದಿ ಸುಚ್ಯಂಕ)ಯಲ್ಲಿ ಗಣನೀಯ ಏರಿಕೆಯಾಗಲಿದೆ ಎಂದು ಕೇಂದ್ರ ಅಬಕಾರಿ ಮೈಸೂರು ವಿಭಾಗದ ಮುಖ್ಯ ಆಯುಕ್ತ ಎಸ್.ರಾಜ್‌ಕುಮಾರ್ ಹೇಳಿದರು.
ನಗರದ ಅತ್ತಾವರದಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿಯಲ್ಲಿ ನಡೆದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸೇವಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರಕು ಸೇವಾ ತೆರಿಕೆ ನೀತಿ ಜಾರಿಯಿಂದ ಉದ್ಯಮಿಗಳು ದೇಶೀಯ ಸರಕುಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಮರ್ಪಕವಾಗಿ ಸ್ಪರ್ಧೆಯನ್ನು ಎದುರಿಸಲು ಸಾಧ್ಯವಾಗುತ್ತದೆ ಎಂದು ಎಸ್.ರಾಜ್‌ಕುಮಾರ್ ತಿಳಿಸಿದರು.
ಜಿಎಸ್‌ಟಿ ಯಿಂದ ದೇಶಾದ್ಯಂತ ಯಾವುದೇ ಅಡೆತಡೆಯಿಲ್ಲದೆ ವಹಿವಾಟು ನಡೆಸಬಹುದು. ವಹಿವಾಟು ವೆಚ್ಚ ಕೂಡ ಕಡಿಮೆಯಾಗುತ್ತದೆ. ಭಾರತದ ಆರ್ಥಿಕ ಮಟ್ಟ ಸುಧಾರಣೆಯಾಗುತ್ತಿರುವ ಇಂದಿನ ದಿನಗಳಲ್ಲಿ ಈ ತೆರಿಗೆ ಪದ್ದತಿ ಪ್ರಸ್ತುತವಾಗಿದೆ ಎಂದು ತಿಳಿಸಿದರು.
ಮಂಗಳೂರು ತೆರಿಗೆ ಇಲಾಖೆಯ ಆಯುಕ್ತ (ಅಹವಾಲು ವಿಭಾಗ) ಡಾ.ಎಸ್.ಶಾಕಿರ್ ಹುಸೇನ್ ಮಾತನಾಡಿ, ಸಮರ್ಪಕ, ಯೋಜನಾಬದ್ಧ ಕಾರ್ಯವಿಧಾನ ಮತ್ತು ನಿರ್ವಹಣೆಯಿಂದ ಸರಕು ಮತ್ತು ಸೇವಾ ತೆರಿಗೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಬಹುದು ಎಂದರು.
ಮಂಗಳೂರು ಆದಾಯ ತೆರಿಗೆಯ ಆಯುಕ್ತ ನರೋತ್ತಮ ಮಿಶ್ರಾ ಉಪಸ್ಥಿತರಿದ್ದರು. ಕೇಂದ್ರ ಅಬಕಾರಿ ಇಲಾಖೆ ಆಯುಕ್ತ ಡಾ.ಎಂ. ಸುಬ್ರಹ್ಮಣ್ಯಂ ಸ್ವಾಗತಿಸಿದರು. ಸತೀಶ್ ಕುಮಾರ್ ತಕ್‌ಬಾವರೆ ವಂದಿಸಿದರು.







