ಗೋಮಾಂಸ ಔತಣ ಕೂಟ ನಡೆಸಿದ ಮೇಘಾಲಯ ಬಿಜೆಪಿ ಮುಖಂಡನ ರಾಜೀನಾಮೆ

ಗುವಾಹಟಿ, ಜೂ.1: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಮೂರನೇ ವರ್ಷಾಚರಣೆಯ ಸಂಭ್ರಮವನ್ನು ತಮ್ಮ ಸಂಪ್ರದಾಯದ ರೀತಿಯಂತೆ ಗೋಮಾಂಸದ ಔತಣ ಕೂಟ ನಡೆಸಿ ಆಚರಿಸಿದ ಮೇಘಾಲಯದ ಬಿಜೆಪಿ ಮುಖಂಡರೋರ್ವರು ಪಕ್ಷಕ್ಕೆ ರಾಜೀನಾಮೆ ನೀಡಿದ ಘಟನೆ ನಡೆದಿದೆ.
ಬಿಜೆಪಿ ಪಕ್ಷದವರು ತಮ್ಮ ಸಿದ್ಧಾಂತವನ್ನು ನಮ್ಮ ಮೇಲೆ ಹೇರಲು ಯತ್ನಿಸುತ್ತಿರುವುದನ್ನು ವಿರೋಧಿಸಿ ನಾನು ಪಕ್ಷ ತ್ಯಜಿಸುತ್ತಿದ್ದೇನೆ. ನಮ್ಮ ಸಂಪ್ರದಾಯದಂತೆ ಔತಣ ಕೂಟ ಆಯೋಜಿಸಿದ್ದರಲ್ಲಿ ತಪ್ಪೇನಿದೆ ಎಂದು ಬಿಜೆಪಿಯ ವೆಸ್ಟ್ ಗರೊ ಹಿಲ್ಸ್ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಬರ್ನಾರ್ಡ್ ಎಂ. ಮರಕ್ ಪ್ರಶ್ನಿಸಿದ್ದಾರೆ.
ಮೇಘಾಲಯವು ಕ್ರೈಸ್ತ ಧರ್ಮೀಯರ ಬಾಹುಳ್ಯವಿರುವ ರಾಜ್ಯವಾಗಿದ್ದು ಈ ರಾಜ್ಯದ ಖಾಸಿ, ಗರೊ ಮತ್ತು ಜೈಂಟಿಯ- ಈ ಮೂರು ಪ್ರಮುಖ ಪಂಗಡಗಳ ಜನರಲ್ಲಿ ಗೋಮಾಂಸ ಭಕ್ಷಣೆ ಸಾಮಾನ್ಯ ವಿಷಯವಾಗಿದೆ. ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮೇಘಾಲಯದಲ್ಲಿ ಗೋಮಾಂಸದ ದರ ಕಡಿಮೆಗೊಳಿಸಲಾಗುವುದು ಎಂದು ಬರ್ನಾರ್ಡ್ ಕೆಲ ದಿನಗಳ ಹಿಂದೆ ನೀಡಿದ್ದ ಹೇಳಿಕೆಗೆ ಪಕ್ಷದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು.
ಗರೊ ಹಿಲ್ಸ್ ಪ್ರದೇಶದಲ್ಲಿ ಬಿಜೆಪಿ ನಿಧಾನವಾಗಿ ತನ್ನ ಬೇರುಗಳನ್ನು ಗಟ್ಟಿಗೊಳಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರಕಾರ ಹೊರಡಿಸಿರುವ ಆದೇಶದ ಬಗ್ಗೆ ಹಲವು ಜನರಲ್ಲಿ ಅತಂಕವಿದೆ. ಈ ಹಿನ್ನೆಲೆಯಲ್ಲಿ ಹಲವರು ಪಕ್ಷ ತ್ಯಜಿಸಲು ನಿರ್ಧರಿಸಿರುವುದಾಗಿ ಬರ್ನಾರ್ಡ್ ತಿಳಿಸಿದ್ದಾರೆ. ಬಿಜೆಪಿ ಗೋಮಾಂಸ ಸೇವನೆಯನ್ನು ನಿಷೇಧಿಸಲು ಪ್ರಯತ್ನಿಸುತ್ತಿದೆ ಎಂದು ಜನರಲ್ಲಿ ಇರುವ ಭೀತಿಯನ್ನು ದೂರಗೊಳಿಸಲು ಜೂನ್ ಎರಡನೇ ವಾರದಲ್ಲಿ ಗೋಮಾಂಸ ಔತಣಕೂಟ ಆಯೋಜಿಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.
ಬಿಜೆಪಿಯ ಉತ್ತರ ಗರೊ ಹಿಲ್ಸ್ ಜಿಲ್ಲಾ ಘಟಕದ ಅಧ್ಯಕ್ಷ ಬಚು ಎಂ. ಮರಕ್ ಕೂಡಾ ಗೋಮಾಂಸ ಉತ್ಸವ ಆಚರಿಸಿಕೊಂಡಿರುವ ಬಗ್ಗೆ ಬುಧವಾರ ಫೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ.
ಬಚು ಸ್ವತಃ ರಾಜೀನಾಮೆ ನೀಡಿದರೆ ಸ್ವಾಗತ. ಇಲ್ಲದಿದ್ದರೆ ಅವರನ್ನು ತೊಲಗಿಸುವ ಬಗ್ಗೆ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದು ಮೇಘಾಲಯ ಬಿಜೆಪಿಯ ಉಸ್ತುವಾರಿ ನಳಿನ್ ಕೊಹ್ಲಿ ತಿಳಿಸಿದ್ದಾರೆ. ಬಿಜೆಪಿಯಂತಹ ಶಿಸ್ತಿನ ಪಕ್ಷದಲ್ಲಿ ಸದಸ್ಯರು ತಮ್ಮ ವೈಯಕ್ತಿಕ ಲಾಭಕ್ಕಾಗಿ ಪಕ್ಷದ ಸಿದ್ಧಾಂತ ಮತ್ತು ಮೋದಿಯವರ ‘ಸಬ್‌ಕ ಸಾಥ್, ಸಬ್‌ಕ ವಿಕಾಸ್’ ಕಾರ್ಯಸೂಚಿಯನ್ನು ಧಿಕ್ಕರಿಸಲು ಅವಕಾಶವಿಲ್ಲ ಎಂದವರು ತಿಳಿಸಿದ್ದಾರೆ.
ಗರೊ ಹಿಲ್ಸ್ ಪ್ರದೇಶದಲ್ಲಿ 26 ವಿಧಾನಸಭಾ ಕ್ಷೇತ್ರವಿದ್ದು ಕೇಂದ್ರ ಸರಕಾರದ ಗೋಹತ್ಯೆ ನಿಷೇಧ ಕಾನೂನಿಂದ ಈ ಪ್ರದೇಶದಲ್ಲಿ ಬಿಜೆಪಿ ಗೆಲ್ಲುವ ಅವಕಾಶಕ್ಕೆ ಭಾರೀ ಹೊಡೆತ ಬೀಳಲಿದೆ ಎಂದು ಹೇಳಲಾಗಿದೆ.







