ಪರೀಕ್ಷಾ ಫಲಿತಾಂಶದಿಂದ ನೊಂದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ

ಮಂಗಳೂರು, ಜೂ. 1: ಪರೀಕ್ಷೆಯ ಫಲಿತಾಂಶಯದಿಂದ ತೀವ್ರವಾಗಿ ನೊಂದುಕೊಂಡಿದ್ದ ವಳಚ್ಚಿಲ್‌ನ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿಯೋರ್ವಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ.
ಚಿಕ್ಕಮಗಳೂರಿನ ನಿವಾಸಿ ಪ್ರಸ್ತುತ ಕಾಲೇಜಿನಲ್ಲಿ ಮೊದಲ ವರ್ಷದ ಬಿಇ ಎಂಜಿನಿಯರಿಂಗ್ ಕಲಿಯುತ್ತಿರುವ ಸುಚೇತನಾ (20) ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿನಿ.
ಗುರುವಾರ ಬಿಇ ಎಂಜಿನಿಯರಿಂಗ್ ಪ್ರಥಮ ವರ್ಷದ ಫಲಿತಾಂಶ ಪ್ರಕಟಗೊಂಡಿದ್ದು, ಸೆಮಿಸ್ಟರ್‌ನ ಒಂದು ವಿಷಯದಿಲ್ಲಿ ಆಕೆ ಅನುತ್ತೀರ್ಣಗೊಂಡಿದ್ದಳು, ಇದರಿಂದ ತೀವ್ರವಾಗಿ ನೊಂದುಕೊಂಡಿದ್ದ ಆಕೆ ಹಾಸ್ಟೆಲ್‌ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ.
ವಿದ್ಯಾರ್ಥಿನಿಯ ಮೃತದೇಹವು ಇಂದು ಮಧ್ಯಾಹ್ನ ಕಾಲೇಜು ಕ್ಯಾಂಪಸ್ ಒಳಗಿರುವ ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಆತ್ಮಹತ್ಯೆ ಮಾಡಿಕೊಳ್ಳುವ ಮುಂಚೆ ಸುಚೇತನಾ ಡೆತ್‌ನೋಟ್‌ನ್ನು ಬರೆದಿದ್ದು, ಅದರಲ್ಲಿ ‘‘ತಾನು ಕಷ್ಟಪಟ್ಟು ಕಲಿತಿದ್ದು, ತನಗೆ ಕಲಿಸಿದ ಹೆತ್ತವರ ಆಕಾಂಕ್ಷೆಯನ್ನು ಈಡೇರಿಸಲು ಸಾಧ್ಯವಾಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾಳೆ ಎಂದು ಹೇಳಲಾಗಿದೆ. ಈ ಬಗ್ಗೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಟಿಯು ಫಲಿತಾಂಶದಲ್ಲಿ ಗೊಂದಲ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ (ವಿಟಿಯು) ಅಧೀನಕ್ಕೊಳಪಟ್ಟ ವಳಚ್ಚಿಲ್‌ನ ಶ್ರೀನಿವಾಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿ ಸುಚೇತನಾ ಆತ್ಮಹತ್ಯೆಯ ಹಿಂದೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯ ಫಲಿತಾಂಶದಲ್ಲಿನ ಗೊಂದಲವೇ ಕಾರಣ ಎಂಬ ಆರೋಪಗಳು ಕೇಳಿಬರುತ್ತಿವೆ.
ಪ್ರಥಮ ಸೆಮಿಸ್ಟರ್ ಪರೀಕ್ಷೆಯನ್ನು ಡಿಸೆಂಬರ್‌ನಲ್ಲಿ ಬರೆದಿದ್ದ ವಿದ್ಯಾರ್ಥಿಗಳ ಫಲಿತಾಂಶವು 5 ತಿಂಗಳ ಬಳಿಕ ಅಂದರೆ ಗುರುವಾರ ಪ್ರಕಟಗೊಂಡಿತ್ತು. ಅಲ್ಲದೇ ಎರಡನೇ ಸೆಮಿಸ್ಟರ್ ಪರೀಕ್ಷೆಯನ್ನು ಜೂನ್ ತಿಂಗಳಲ್ಲಿ ಬರೆಯಲು ಪರೀಕ್ಷಾ ಶುಲ್ಕವನ್ನು ದುಪ್ಪಟ್ಟುಗೊಳಿಸಲಾಗಿತ್ತು.
ವಿಟಿಯುಗೊಳಪಟ್ಟ ಕಾಲೇಜುಗಳಲ್ಲಿ ಹಲವು ಪ್ರತಿಭಾವಂತ ವಿದ್ಯಾರ್ಥಿಗಳಿದ್ದು, ವಿಟಿಯು ಗೊಂದಲಗಳಿಂದಾಗಿ ಕೆಲವು ವಿದ್ಯಾರ್ಥಿಗಳು ಸಂಕಷ್ಟಕ್ಕೀಡಾಗಿದ್ದಾರೆ ಎಂಬ ಆರೋಪಗಳು ವಿಟಿಯು ವಿರುದ್ಧ ಕೇಳಿ ಬರುತ್ತಿದೆ. ಈ ಬಗ್ಗೆ ಕೆಲವು ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆದಿದ್ದವು.







