ಯುಪಿಎಸ್‌ಸಿ: ರಂಜನ್ ಆರ್. ಶೆಣೈಗೆ 112ನೇ ರ್ಯಾಂಕ್

ಉಡುಪಿ, ಜೂ.1: ಪ್ರತಿಷ್ಠಿತ ಯುಪಿಎಸ್‌ಸಿ ಪರೀಕ್ಷೆಯ ಫಲಿತಾಂಶದಲ್ಲಿ ಮಣಿಪಾಲದ ರಂಜನ್ ಆರ್.ಶೆಣೈ 112ನೇ ರ್ಯಾಂಕ್ ಪಡೆದಿದ್ದು, ಐಎಫ್‌ಎಸ್ ಸೇವೆಗೆ ಸೇರ್ಪೆಗೊಳ್ಳುವ ನಿರೀಕ್ಷೆಯಲ್ಲಿದ್ದಾರೆ.
ಕಳೆದ ವರ್ಷ ಯುಪಿಎಸ್‌ಸಿ ಪರೀಕ್ಷೆಯಲ್ಲಿ 391ನೆಯ ರ್ಯಾಂಕ್ ಗಳಿಸಿದ್ದ ರಂಜನ್ ಶೆಣೈ, ಐಆರ್‌ಎಸ್ (ರೆವೆನ್ಯೂ) ವಿಭಾಗಕ್ಕೆ ಆಯ್ಕೆಗೊಂಡು ಹೈದರಾಬಾದ್‌ನಲ್ಲಿ ಪ್ರೊಬೇಷನರಿಯಾಗಿ ತರಬೇತಿ ಪಡೆಯುತ್ತಿದ್ದಾರೆ. ಈ ಬಾರಿ ಮತ್ತೊಮ್ಮೆ ಪರೀಕ್ಷೆ ಬರೆದು ಇದೀಗ 112ನೇ ಸ್ಥಾನ ಸಂಪಾದಿಸಿದ್ದಾರೆ.
ಮಣಿಪಾಲ ಕೆಎಂಸಿ ಡೀನ್, ಸರ್ಜರಿ ವಿಭಾಗದ ಪ್ರಾಧ್ಯಾಪಕ ಡಾ. ರಾಜಗೋಪಾಲ ಶೆಣೈ ಮತ್ತು ಅರಿವಳಿಕೆ ವಿಭಾಗದ ಪ್ರಾಧ್ಯಾಪಕಿ ಡಾ. ಅನಿತಾ ಶೆಣೈ ಅವರ ಪುತ್ರ ರಂಜನ್ ಶೆಣೈ ಪ್ರಥಮ ಪ್ರಯತ್ನದಲ್ಲೇ 391ನೇ ರ್ಯಾಂಕ್ ಪಡೆದಿದ್ದರು.
ಆದರೆ ತನ್ನ ರ್ಯಾಂಕಿಂಗ್‌ನ್ನು ಉತ್ತಮ ಪಡಿಸಿಕೊಂಡು ವಿದೇಶಾಂಗ ಖಾತೆಯಲ್ಲಿ ಸೇವೆ ಸಲ್ಲಿಸುವ ಗುರಿಯನ್ನು ಅವರು ಹೊಂದಿದ್ದರು. ರಂಜನ್ ಶೆಣೈ ತನ್ನ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಬ್ರಹ್ಮಾವರದ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್, ಪಿಯುಸಿ ಶಿಕ್ಷಣವನ್ನು ಮಣಿಪಾಲ ಪ.ಪೂ. ಕಾಲೇಜು, ಎಂಜಿನಿಯರಿಂಗ್ ಪದವಿಯನ್ನು 2011ರಲ್ಲಿ ಕಾನ್ಪುರ ಐಐಟಿಯಿಂದ ಪಡೆದಿದ್ದರು. ಎರಡು ವರ್ಷ ಮುಂಬೈ ಯಲ್ಲಿ ಎನ್‌ಜಿಒ ಮೂಲಕ ಕೊಳಚೆಗೇರಿ ಪ್ರದೇಶದಲ್ಲಿ 4 ಮತ್ತು 5ನೆಯ ತರಗತಿ ಮಕ್ಕಳಿಗೆ ರಂಜನ್ ಶೆಣೈ ಪಾಠ ಮಾಡಿದ್ದರು.







