ರಾಜ್ಯದಲ್ಲಿ ಪ್ರವಾಸೋದ್ಯಮ ಪ್ಯಾಕೇಜ್‌ಗೆ ರೈಲ್ವೆ ಸಿದ್ಧ: ಕೇಂದ್ರ ಸಚಿವ ಸುರೇಶ ಪ್ರಭು
ಶೀಘ್ರ ಕಾರವಾರಕ್ಕೆ ಐಷಾರಾಮಿ ರೈಲು ಸೇವೆ ‘ತೇಜಸ್’

ಕಾರವಾರ, ಜೂ.1: ರಾಜ್ಯ ಸರಕಾರ ಸಹಯೋಗ ನೀಡಿದರೆ ಪ್ರವಾಸೋದ್ಯಮ ಪ್ಯಾಕೇಜ್ ರೂಪಿಸಲು ರೈಲ್ವೆ ಇಲಾಖೆ ಸಿದ್ಧವಿದೆ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ ಪ್ರಭು ಹೇಳಿದ್ದಾರೆ.
ಗುರುವಾರ ಜಿಲ್ಲಾ ರಂಗಮಂದಿರದಲ್ಲಿ ಕಾರವಾರ ವಿಭಾಗದ ರೈಲ್ವೆ ಪ್ರಯಾಣಿಕರ ವಿವಿಧ ಸೌಲಭ್ಯಗಳ ಹಾಗೂ ಸವಲತ್ತುಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಹಳಷ್ಟು ಅಭಿವೃದ್ಧಿಯಾಗಿದ್ದರೂ ಕಾರವಾರ ತನ್ನತನವನ್ನು ಉಳಿಸಿಕೊಂಡು ಬಂದಿದೆ. ಕಾರವಾರದ ಅಭಿವೃದ್ಧಿಗೆ ಕೊಂಕಣ ರೈಲ್ವೆ ಪ್ರಮುಖ ಕೊಡುಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕೊಡುಗೆ ನೀಡಲಿದೆ. ಈಗಾಗಲೇ ಐಷಾರಾಮಿ ರೈಲು ಸೇವೆ ‘ತೇಜಸ್’ ಮುಂಬೈಯಿಂದ ಗೋವಾ ಸೇವೆ ಆರಂಭಿಸಿದ್ದು, ಇದರ ಪ್ರಯೋಜನ ಕಾರವಾರಕ್ಕೂ ಲಭಿಸಲಿದೆ.
ಐಆರ್‌ಸಿಟಿಸಿ ಸಹಯೋಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ರಾಜ್ಯ ಸರಕಾರ ಪ್ಯಾಕೇಜ್ ರೂಪಿಸಿದರೆ ಎಲ್ಲ ನೆರವು ಒದಗಿಸಲಾಗುವುದು ಎಂದರು.
ಕೇಂದ್ರ ಸರಕಾರ ಎಲ್ಲ ಪ್ರಮುಖ ಬಂದರುಗಳನ್ನು ಸಂಪರ್ಕಿಸುವ ಸಾಗರಮಾಲಾ ಯೋಜನೆ ಅನುಷ್ಠಾನಗೊಳಿಸುತ್ತಿದ್ದು, ಇದರ ಲಾಭ ಕಾರವಾರ ಬಂದರಿಗೆ ಸಹ ಲಭಿಸಲಿದೆ. ಹುಬ್ಬಳ್ಳಿ ಅಂಕೋಲಾ ರೈಲುಮಾರ್ಗ ನಿರ್ಮಾಣಕ್ಕಾಗಿ ಗ್ರೀನ್ ಟ್ರಿಬ್ಯೂನಲ್ ಅನುಮತಿಯನ್ನು ಕಾಯಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಕೊಂಕಣ ರೈಲ್ವೆ ಆರಂಭಕ್ಕೆ ಕೊಡುಗೆ ನೀಡಿದ್ದ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರಿನಲ್ಲಿ ಗೋವಾದಲ್ಲಿ ಹಾಗೂ ರಾಮಕೃಷ್ಣ ಹೆಗಡೆ ಹೆಸರಿನಲ್ಲಿ ಉಡುಪಿಯಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಕೌಶಲ್ಯ ಅಭಿವೃದ್ಧಿ ಕೇಂದ್ರ ಆರಂಭಿಸಲು ಸಹಕಾರ ಸಂಸ್ಥೆಗಳು ಹಾಗೂ ರಾಜ್ಯ ಸರಕಾರ ಸಹಕಾರ ನೀಡಬೇಕಾಗಿದೆ ಎಂದು ಅವರು ಮನವಿ ಮಾಡಿದರು.
ಶಾಸಕ ಸತೀಶ್ ಸೈಲ್ ಮಾತನಾಡಿ, ಜಿಲ್ಲೆಯ ಬಹುವರ್ಷಗಳ ಬೇಡಿಕೆಯಾದ ಅಂಕೋಲಾ-ಹುಬ್ಬಳ್ಳಿ ರೈಲು ಸೇವೆ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಹುಬ್ಬಳ್ಳಿ-ಅಂಕೋಲಾ ರೈಲುಮಾರ್ಗ ಆರಂಭಿಸಲು ರಾಜ್ಯ ಸರಕಾರ ಮಾತ್ರವಲ್ಲ ರೈಲ್ವೆ ಇಲಾಖೆ ಉತ್ಸುಕವಾಗಿದೆ ಎಂದರು.
ಯೋಜನೆ ಆರಂಭಿಸಲು ಇರುವ ಅಡೆತಡೆಗಳ ಕುರಿತು ಜೂ.2ರಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಅವರೊಂದಿಗೆ ಸಭೆ ನಿಗದಿಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ನಿಗಮದ ಚೇರಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್ ಸಂಜಯ ಗುಪ್ತಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಯ ಪಾಟೀಲ್, ತಾಲೂಕು ಪಂಚಾಯತ್ ಅಧ್ಯಕ್ಷೆ ಪ್ರಮೀಳಾ ನಾಯ್ಕ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.







