ರೈತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ
ತರೀಕೆರೆ, ಜೂ.1: ತಾಲೂಕಿನಲ್ಲಿ ಎಪ್ರಿಲ್ ಮತ್ತು ಮೇ ತಿಂಗಳ ಅವಧಿಯಲ್ಲಿ ಐದು ಮಂದಿ ರೈತರ ಆತ್ಮಹತ್ಯೆ ಪ್ರಕರಣಗಳು ದಾಖಲಾಗಿದ್ದು, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರವಾಗಿ ನೀಡಲು ಕ್ರಮ ವಹಿಸಲಾಗಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚಿತ್ರಸೇನ ತಿಳಿಸಿದ್ದಾರೆ.
ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಪದ್ಮಾವತಿ ಸಂಜೀವ್‌ಕುಮಾರ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಅವರು ಮಾಹಿತಿ ನೀಡಿದರು.
ತಾಲೂಕಿನಲ್ಲಿ 103.6 ಎಂ.ಎಂ. ವಾಡಿಕೆ ಮಳೆಯಾಗಬೇಕಿದ್ದು 87.9 ಎಂ.ಎಂ. ಮಳೆಯಾಗಿದ್ದು, ತಾಲೂಕಿನಲ್ಲಿ ರೈತರು ಭೂಮಿಯನ್ನು ಬಿತ್ತನೆಗೆ ಸಜ್ಜುಗೊಳಿಸಿದ್ದಾರೆ. ರೈತ ಸಂಪರ್ಕ ಕೇಂದ್ರದ ಮೂಲಕ ಆಯಾ ಕಾಲಕ್ಕೆ ತಕ್ಕಂತೆ ಬಿತ್ತನೆಗೆ ಬೇಕಾಗುವ ಬೀಜವನ್ನು ರೈತರಿಗೆ ವಿತರಿಸಲಾಗುವುದು.
1ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ನೆಲಗಡಲೆ ಬಿತ್ತನೆಯಾಗಿದ್ದು, ಮುಸುಕಿನ ಜೋಳ ಬಿತ್ತಬೇಕಿದೆ. ಈ ಬಾರಿ 41,700 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಬೆಳೆಗಳು ಬಿತ್ತನೆಯಾಗುವ ನಿರೀಕ್ಷೆ ಇದೆ. ರೈತರಿಗಾಗಿ ಕೃಷಿ ಅಭಿಯಾನ ಹಾಗೂ ಕೃಷಿ ಭಾಗ್ಯ ಯೋಜನೆ ಜಾರಿಯಲ್ಲಿದ್ದು, ಶೇ 80ರಷ್ಟು ಸಬ್ಸಿಡಿ ಹಣವನ್ನು ಸರಕಾರ ರೈತರಿಗೆ ಕೃಷಿ ಹೊಂಡ ನಿರ್ಮಿಸಿಕೊಳ್ಳಲು ಸಹಾಯಧನದ ರೂಪದಲ್ಲಿ ನೀಡುತ್ತಿದೆ.
ಈಗಾಗಲೇ 300 ಮಂದಿ ಫಲಾನುಭವಿಗಳನ್ನು ಈ ಯೋಜನೆಯಲ್ಲಿ ಗುರುತಿಸಲಾಗಿದ್ದು ಇದರಿಂದಾಗಿ ಶೇ30ರಷ್ಟು ಹೆಚ್ಚು ಕೃಷಿ ಇಳುವರಿಯಾಗಲಿದೆ ಎಂದರು.
ಪಶು ವೈದ್ಯಾಧಿಕಾರಿ ಡಾ.ಪ್ರಭಾಕರ್ ಮಾತನಾಡಿ, ಕಿಸಾನ್ ಸಂಪರ್ಕ ಸಭೆ ನಡೆಸಿ ರೈತರಿಗೆ ಇಲಾಖೆಯ ಸೌಲಭ್ಯಗಳ ಬಗ್ಗೆ ಹಾಗು ಜಾನುವಾರುಗಳಿಗೆ ರೋಗ ತಡೆಗಟ್ಟುವ ಕುರಿತು ಮಾಹಿತಿ ನೀಡಲಾಗುವುದು ಎಂದರು.
ತಾಪಂ ಇಒ ಎಸ್.ಎಲ್. ಗಂಗಾಧರಮೂರ್ತಿ ಮಾತನಾಡಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಯೋಗೀಶ್ ಮಾತನಾಡಿ, ಎಸ್ಸಿ, ಎಸ್ಟಿ ಜನಾಂಗದವರು ಸರಳವಾಗಿ ಮದುವೆಯಾದರೆ 50 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಎಂದರು.
ಸಭೆಯಲ್ಲಿ ಅಂಗವಿಕಲರಿಗೆ ನಾಲ್ಕು ಚಕ್ರದ ವಾಹನ ಹಾಗೂ ಪೋಷಣಾ ಭತ್ಯೆಯ ಚೆಕ್‌ನ್ನು ವಿತರಿಸಲಾಯಿತು. ತಾಪಂ ಸದಸ್ಯರಿಗೆ ಹಾಗೂ ಅಧಿಕಾರಿಗಳಿಗೆ ವಾರ್ಷಿಕ ದಿನಚರಿ ಪುಸ್ತಕ ವಿತರಿಸಲಾಯಿತು.
ಉಪಾಧ್ಯಕ್ಷೆ ಗೌರಮ್ಮ ಕೃಷ್ಣಮೂರ್ತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷ ಗಂಗಾಧರಪ್ಪ ವಿವಿಧ ಇಲಾಖಾಧಿಕಾರಿಗಳು ಇದ್ದರು.







