"ಪ್ರತಿಭಟನೆಯ ಫೋಟೊ ತೆಗೆದಿಲ್ಲ" ಎಂದು ವಿದ್ಯಾರ್ಥಿಗೆ ಇರಿದ ಗೋರಕ್ಷಕರು

ಹರ್ಯಾಣ, ಜೂ.1: ಪ್ರತಿಭಟನೆಯ ಫೋಟೊ ತೆಗೆದಿಲ್ಲ ಎನ್ನುವ ಕ್ಷುಲ್ಲಕ ಕಾರಣಕ್ಕೆ ಗೋರಕ್ಷಕರು ವಿದ್ಯಾರ್ಥಿಯೋರ್ವನಿಗೆ ಚೂರಿಯಿಂದ ಇರಿದು ಕೊಲೆಗೈಯಲು ಯತ್ನಿಸಿದ ಘಟನೆ ಹರ್ಯಾಣದ ಸೋನಿಪತ್ ಜಿಲ್ಲೆಯಲ್ಲಿ ನಡೆದಿದೆ.
ಘಟನೆಯಿಂದ ಗಂಭೀರವಾಗಿ ಗಾಯಗೊಂಡ ಬಿಎ 2ನೆ ವರ್ಷದ ವಿದ್ಯಾರ್ಥಿ ಶಿವಂರನ್ನು ಹೊಸದಿಲ್ಲಿಯ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೇರಳದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೋಣವನ್ನು ಕಡಿದಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಬೇಕು ಎಂದು ಒತ್ತಾಯಿಸಿ ಗೋರಕ್ಷಕ್ ಸೇವಾ ದಳ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು. ಅಲ್ಲಿಗೆ ಶಿವಂ ತನ್ನ ಗೆಳೆಯ ಪತ್ರಕರ್ತರೊಬ್ಬನ ಜೊತೆ ತೆರಳಿದ್ದು, ಕ್ಯಾಮರಾ ಹಿಡಿದಿದ್ದರು. ಪ್ರತಿಭಟನೆಯ ಸಂದರ್ಭ ಅಧಿಕಾರಿಗಳಿಗೆ ಮನವಿ ಸಲ್ಲಿಸುವ ಫೋಟೊ ಕ್ಲಿಕ್ಕಿಸುವಂತೆ ಗೋರಕ್ಷಕರು ಶಿವಂಗೆ ಹೇಳಿದ್ದಾರೆ. ಆದರೆ ಶಿವಂ ಅದನ್ನು ನಿರಾಕರಿಸಿದ್ದಾರೆ. ಈ ಸಂದರ್ಭ ಗೋರಕ್ಷಕರು ಶಿವಂ ವಿರುದ್ಧ ಮುಗಿಬಿದ್ದಿದ್ದು, ಮಾತಿನ ಚಕಮಕಿ ನಡೆದಿದೆ. ಸ್ಥಳದಲ್ಲಿದ್ದವರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು,
ಪ್ರತಿಭಟನೆಯ ನಂತರ ಶಿವಂ ಅಲ್ಲಿಂದ ತೆರಳಿದ್ದು, ಅವರನ್ನು ಹಿಂಬಾಲಿಸಿದ ಗೋರಕ್ಷಕರು ಮಾರುಕಟ್ಟೆಯೊಂದರಲ್ಲಿ ಸುತ್ತುವರಿದು ಹೊಟ್ಟೆ ಹಾಗೂ ಎದೆಯ ಭಾಗಕ್ಕೆ ಇರಿದಿದ್ದಾರೆ ಎನ್ನಲಾಗಿದೆ. “ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರಗೆ ದಾಖಲಿಸಲಾಯಿತಾದರೂ ಪರಿಸ್ಥಿತಿ ಚಿಂತಾಜನಕವಾಗಿದ್ದರಿಂದ ದಿಲ್ಲಿಗೆ ಕರೆದೊಯ್ಯಲಾಗಿದೆ” ಎಂದು ಪೊಲೀಸ್ ಅಧಿಕಾರಿ ಅಜೈಬ್ ಸಿಂಗ್ ಹೇಳಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಮೋಹಿತ್ ಎಂಬಾತನನ್ನು ಬಂಧಿಸಲಾಗಿದ್ದು, ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳು ಗೋರಕ್ಷಕರ ಗುಂಪಿನವರು ಎಂದು ಉಲ್ಲೇಖಿಸಲಾಗಿದೆ.







