ಅವಘಡ ಸಂಭವಿಸಿದರೆ ಕ್ರಿಮಿನಲ್ ಪ್ರಕರಣ: ಗಣಿ, ಕೋರೆ ಮಾಲಕರಿಗೆ ಎಚ್ಚರಿಕೆ
ಉಡುಪಿ, ಜೂ.1: ಜಿಲ್ಲೆಯಲ್ಲಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಕಲ್ಲು ಗಣಿ ಗುತ್ತಿಗೆದಾರರಿಗೆ ಹಾಗೂ ಈಗಾಗಲೇ ಅವಧಿ ಮುಗಿದಿರುವ ಈ ಹಿಂದೆ ನಿರ್ವಹಿಸಿದ ಕಲ್ಲು ಗಣಿ ಗುತ್ತಿಗೆದಾರರಿಗೂ ಸಹ ಕಲ್ಲು ಕೋರೆಗಳ ಸುತ್ತಲೂ ತಂತಿಬೇಲಿಯನ್ನು ಅಳವಡಿಸಿ ಅಪಾಯದ ಮಾಹಿತಿ ನೀಡುವ ನಾಮಫಲಕ ವನ್ನು ಅಳವಡಿಸಲು ನಿರ್ದೇಶನ ನೀಡಲಾಗಿದೆ.
ಇನ್ನು ಮುಂದೆ ಜಿಲ್ಲೆಯ ಕೋರೆ ಹಾಗೂ ಗಣಿ ಪ್ರದೇಶಗಳಲ್ಲಿ ಯಾವುದೇ ಅವಘಡಗಳು ಸಂಭವಿಸಿದಲ್ಲಿ ಅದರ ಮಾಲಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಂದು ಅವರಿಗೆ ಈಗಾಗಲೇ ನೋಟಿಸ್‌ಗಳ ಮೂಲಕ ಎಚ್ಚರಿಕೆಯನ್ನು ನೀಡಲಾಗಿದೆ.
ಮಳೆಗಾಲದಲ್ಲಿ ಜಿಲ್ಲೆಯ ಕಲ್ಲು ಕೋರೆಗಳು ಹಾಗೂ ಈ ಹಿಂದೆ ನಿರ್ವಹಿಸಿದ ಕಲ್ಲುಗುಂಡಿಗಳಲ್ಲಿ ನೀರು ಸಂಗ್ರಹವಾಗುವುದು ಸಾಮಾನ್ಯವಾಗಿದ್ದು, ಮಕ್ಕಳು ಹಾಗೂ ಮಹಿಳೆಯರು ಈ ಹಿಂದೆ ನಿರ್ವಹಿಸಿದ ಕಲ್ಲುಗುಂಡಿಗಳಲ್ಲಿ ನೀರಾಟವಾಡುವಾಗ, ಸ್ನಾನಕ್ಕೆ ಇಳಿದಾಗ ಅಥವಾ ಬಟ್ಟೆ ತೊಳೆಯಲು ಹೋದಾಗ ಅವಘಡಗಳು ಸಂಭವಿಸಿ ಪ್ರಾಣ ಹಾನಿಯಾಗಿರುವ ಹಲವು ನಿದರ್ಶನಗಳಿವೆ. ಇಂಥ ನೀರು ತುಂಬಿರುವ ಕಲ್ಲು ಗುಂಡಿಗಳ ಬಳಿ ಮಹಿಳೆ ಯರು ಮತ್ತು ಮಕ್ಕಳು ತೆರಳದಂತೆ ಜಾಗ್ರತೆ ವಹಿಸುವಂತೆ ಹಿರಿಯ ಭೂ ವಿಜ್ಞಾನಿ ಗಳು ಪ್ರಕಟಣೆಯಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.







