ಉಡುಪಿ: ಪುನರ್ವಸತಿ ಕೇಂದ್ರ ಸ್ಥಾಪನೆಗೆ ಒತ್ತಾಯಿಸಿ ಮನವಿ

ಮಣಿಪಾಲ, ಜೂ.1: ಉಡುಪಿ ಜಿಲ್ಲೆಯಲ್ಲಿ ಅಸಹಾಯಕರಾದ ಜನರಿಗಾಗಿ ಎಲ್ಲಾ ಮೂಲಭೂತ ಸೌಕರ್ಯಗಳಿರುವ ಪುನರ್ವಸತಿ ಕೇಂದ್ರವೊಂದನ್ನು ಸ್ಥಾಪಿಸುವಂತೆ ಒತ್ತಾಯಿಸಿ ಸಮಾಜ ಸೇವಕ ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿ ಟ್ರಸ್ಟ್ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರದರ್ಶನ ನಡೆಸಿ, ಬಳಿಕ ಮನವಿಯ ಮೂಲಕ ಒತ್ತಾಯಿಸಿದೆ.
ಜಿಲ್ಲೆಯಲ್ಲಿ ಸಾವಿರಾರು ಮಂದಿ ಸ್ಥಳೀಯ ಹಾಗೂ ಹೊರ ಜಿಲ್ಲೆ, ರಾಜ್ಯ ಗಳಿಂದ ವಲಸೆ ಬಂದ ಅಸಹಾಯಕ ವೃದ್ಧರು, ಬಡವರು, ಮಹಿಳೆಯರು, ಮನೆಯಿಂದ ಹೊರತಳ್ಳಲ್ಪಟ್ಟ ಹಿರಿಯ ನಾಗರಿಕರು, ಅನಾಥರು, ಬಿಕ್ಷುಕರು, ಮಾನಸಿಕ ಅಸ್ವಸ್ಥರು ಇಂದು ಬೀದಿ ಬದಿಯಲ್ಲಿ ಚಿಂತಾಜನಕ, ನರಕಯಾತನೆಯ ಬದುಕು ಸಾಗಿಸುತಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಮಾನವೀಯತೆಯ ನೆಲೆಯಲ್ಲಿ ಸಾಮಾಜಿಕ ಕಾರ್ಯಕರ್ತರಿಗೆ ಸಮಾಜದ ಅಸಹಾಯಕರ ನೋವುಗಳಿಗೆ ಸ್ಪಂಧಿಸಲು ಸರಕಾರದ ಯಾವೊಂದು ಸಮರ್ಪಕ ವ್ಯವಸ್ಥೆಯೂ ಇಲ್ಲವಾಗಿದೆ. ಆದುದರಿಂದ ಜಿಲ್ಲೆಯಲ್ಲಿ ಇಂಥವರಿಗಾಗಿ ಪುನರ್ವಸತಿ ವ್ಯವಸ್ಥೆ ಕಲ್ಪಿಸಲು ಸರಕಾರದ ಉಸ್ತುವಾರಿಯಲ್ಲೇ ನಡೆಸಲ್ಪಡುವ ವೃದ್ಧಾಶ್ರಮ, ಅನಾಥಾಶ್ರಮ ಅಥವಾ ಪುನರ್ವಸತಿ ಕೇಂದ್ರಗಳನ್ನು ತೆರೆಯುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
ಜಿಲ್ಲೆಯಲ್ಲಿ ಸಾಮಾನ್ಯವಾಗಿರುವ, ನಿತ್ಯವೂ ಕಾಣಿಸಿಕೊಳ್ಳುತ್ತಿರುವ ಇಂಥ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ತ ಅಸಹಾಯಕರಿಗೆ ಉಡುಪಿ ಜಿಲ್ಲೆಯಲ್ಲಿ ಸಕಲ ಮೂಲ ಸೌಕರ್ಯ ಹೊಂದಿದ ಪುನರ್ವಸತಿ ಕೇಂದ್ರ, ವೃದ್ಧಾಶ್ರಮವನ್ನು ನಿರ್ಮಿಸಬೇಕೆಂದು ಜಿಲ್ಲಾ ನಾಗರಿಕ ಸಮಿತಿ ಸಮಾಜದ ಹಿತದೃಷ್ಠಿಯಿಂದ ಒತ್ತಾಯಿಸಲಾಗುತ್ತಿದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.
ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಮುಂತಾದವರನ್ನೊಳಗೊಂಡ ಸಮಿತಿ ಅಪರ ಜಿಲ್ಲಾಧಿಕಾರಿ ಅನುರಾದ ಅವರಿಗೆ ಮನವಿ ಪತ್ರವನ್ನು ಅರ್ಪಿಸಿತು.