ಯುಪಿಎಸ್ಸಿ ಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ: ನವೀನ್ ಭಟ್ ಬಂಟ್ವಾಳ
ಬಂಟ್ವಾಳ, ಜೂ. 1: ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಛಲ ಮತ್ತು ಗುರಿ ಇದ್ದರೆ ಯಾವುದನ್ನು ಬೇಕಾದರೂ ಸಾಧಿಸಬಹುದು ಎಂಬುದನ್ನು ನಾನು ಕಲಿತೆ. ನನ್ನ ಫಲಿತಾಂಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯುಪಿಎಸ್ಸಿ ಪರೀಕ್ಷೆ ಬರೆಯುವವರಿಗೆ ಮಾದರಿಯಾಗಿದೆ. ಹೀಗೆಂದು ’ವಾರ್ತಾಭಾರತಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡವರು ಅಖಿಲ ಭಾರತ ಮಟ್ಟದ 2016ನೆ ಸಾಲಿನ ಯುಪಿಎಸ್ಸಿ ಸಿವಿಲ್ ಸರ್ವಿಸ್ ಪರೀಕ್ಷೆಯಲ್ಲಿ 37ನೆ ರ್ಯಾಂಕ್ ಪಡೆದು ತೇರ್ಗಡೆಯಾದ ಬಂಟ್ವಾಳದ ನವೀನ್ ಭಟ್.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಐಟಿ, ವೈದ್ಯಕೀಯ ಸಹಿತ ವೃತ್ತಿಪರ ಪದವಿಗಳನ್ನೇ ಆಯ್ಕೆ ಮಾಡುತ್ತಿ ದ್ದಾರೆ. ಸಿವಿಲ್ ಸರ್ವೀಸ್ ಪರೀಕ್ಷೆ ಬರೆಯುವವರು ಅತೀ ಕಡಿಮೆ. ಸಿವಿಲ್ ಸರ್ವೀಸ್ ತುಂಬಾ ಕಷ್ಟ ಎಂಬ ತಪ್ಪು ಅಭಿಪ್ರಾಯವೂ ನಮ್ಮ ಜಿಲ್ಲೆಯ ವಿದ್ಯಾರ್ಥಿಗಳಲ್ಲಿದೆ. ಛಲ, ಗುರಿ ಇದ್ದರೆ ಎಲ್ಲವು ಸುಲಭ ಎಂಬುದಕ್ಕೆ ನಾನೆ ಮಾದರಿ ಎಂದು ಅವರು ತಿಳಿಸಿದ್ದಾರೆ.
ನಾನೂ ಮಂಗಳೂರಿನವನೆ. ನನ್ನಿಂದ ಯುಪಿಎಸ್ಸಿ ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯಲು ಸಾಧ್ಯವಾಗಿದೆ ಎಂದಾದರೆ ಜಿಲ್ಲೆಯಲ್ಲಿರುವ ಎಲ್ಲ ಪ್ರತಿಭಾನಿತ್ವರಿಗೆ ಖಂಡಿತಾ ಸಾಧ್ಯವಿದೆ. ನನ್ನ ರ್ಯಾಂಕಿನಿಂದ ಹುಮ್ಮಸ್ಸು ಪಡೆದು ದಕ್ಷಿಣ ಕನ್ನಡ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸಿವಿಲ್ ಸರ್ವೀಸ್‌ಗೆ ಆಯ್ಕೆಯಾಗಬೇಕು ಎಂದು ನಾನು ಹಾರೈಸುತ್ತಿದ್ದೇನೆ ಎಂದು ನವೀನ್ ಭಟ್ ಹೇಳಿದ್ದಾರೆ.
ನಾನು ಬೆಂಗಳೂರಿನಲ್ಲಿ ಮೆಡಿಕಲ್ ಕಾಲೇಜಿನಲ್ಲಿ ಕಲಿಯುತ್ತಿರುವಾಗ 15 ಮಂದಿ ಸ್ನೇಹಿತರ ತಂಡವಿತ್ತು. ತಂಡದಲ್ಲಿದ್ದ ನಾವೆಲ್ಲ ಒಟ್ಟು ಸೇರಿ ವ್ಯಾಸಾಂಗ ಮಾಡುತ್ತಿದ್ದೆವು. ಚರ್ಚೆ ಮಾಡುತ್ತಿದ್ದೆವು. ಗ್ರೂಪ್ ಸ್ಟಡಿ ಮಾಡಿರುವುದರಿಂದ ಪರೀಕ್ಷೆ ಎದುರಿಸಲು ತುಂಬಾ ಸಹಾಯವಾಗಿದೆ. ಪ್ರತೀ ದಿನ 4ರಿಂದ 5 ಗಂಟೆ ಓದುತ್ತಿದ್ದೆವು. ಸಮಯ ಸಿಕ್ಕಾಗ ಪ್ರವಾಸ, ಟ್ರಕ್ಕಿಂಗ್‌ಗೆ ಹೂಗುತ್ತಿದ್ದೆವು ಎಂದು ತನ್ನ ಕಲಿಕೆಯ ಬಗ್ಗೆ ನವೀನ್ ಹಂಚಿಕೊಂಡಿದ್ದಾರೆ.
ವೈದ್ಯನಾಗಿ ಜನರಿಗೆ ಸೇವೆ ಮಾಡಬಹುದು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ಒಬ್ಬ ಐಎಎಸ್ ಅಧಿಕಾರಿಯಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರ ಸೇವೆ ಮಾಡಲು ಅವಕಾಶ ದೊರೆಯುತ್ತದೆ. ಜನಸಾಮಾನ್ಯರ ಸೇವೆ ಮಾಡುವ ಹಂಬಲವಿರುವುದರಿಂದಲೇ ನಾಗರಿಕ ಸೇವೆಯನ್ನು ಆಯ್ಕೆ ಮಾಡಿದ್ದೇನೆ. ಮುಂದೆ ಕರ್ನಾಟಕದ ಕೇಡರ್ ಆಗಿ ಸೇವೆ ಸಲ್ಲಿಸುತ್ತೇನೆ ಎಂದು ತನ್ನ ಸಮಾಜ ಸೇವೆಯ ಹಂಬಲದ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.







