ಫ್ರೆಂಚ್ ಓಪನ್: ಮರ್ರೆ, ನಿಶಿಕೊರಿ ಮೂರನೆ ಸುತ್ತಿಗೆ ಲಗ್ಗೆ

ಪ್ಯಾರಿಸ್, ಜೂ.1: ವಿಶ್ವ ನಂ.1 ಆಟಗಾರ ಆ್ಯಂಡಿ ಮರ್ರೆ, ಜಪಾನ್‌ನ ಆಟಗಾರ ಕಿ ನಿಶಿಕೊರಿ ಫ್ರೆಂಚ್ ಓಪನ್‌ನಲ್ಲಿ ಮೂರನೆ ಸುತ್ತಿಗೆ ತಲುಪಿದ್ದಾರೆ.
ಗುರುವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ 8ನೆ ಶ್ರೇಯಾಂಕದ ಆಟಗಾರ ನಿಶಿಕೊರಿ ಅವರು ಫ್ರಾನ್ಸ್‌ನ ಜೆರೆಮಿ ಚಾರ್ಡಿ ಅವರನ್ನು 6-3, 6-0, 7-6(5) ಸೆಟ್‌ಗಳ ಅಂತರದಿಂದ ಮಣಿಸಿದರು.
2015ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದ ನಿಶಿಕೊರಿ ಮುಂದಿನ ಸುತ್ತಿನಲ್ಲಿ ದಕ್ಷಿಣ ಕೊರಿಯದ ಹಿಯೊನ್ ಚುಂಗ್‌ರನ್ನು ಎದುರಿಸಲಿದ್ದಾರೆ.
2016ರ ರನ್ನರ್-ಅಪ್ ಮರ್ರೆ ಸ್ಲೋವಾಕಿಯದ ಮಾರ್ಟಿನ್ ಕ್ಲಿಝಾನ್‌ರನ್ನು 6-7(3/7), 6-2, 6-2, 7-6(7/3) ಸೆಟ್‌ಗಳಿಂದ ಮಣಿಸಿದರು. ಮರ್ರೆ ಮುಂದಿನ ಸುತ್ತಿನಲ್ಲಿ ಮಾರ್ಟಿನ್ ಡೆಲ್ ಪೊಟ್ರೊರನ್ನು ಎದುರಿಸಲಿದ್ದಾರೆ.
5 ವರ್ಷಗಳ ಬಳಿಕ ಫ್ರೆಂಚ್ ಓಪನ್‌ನಲ್ಲಿ ಆಡಿದ ಡೆಲ್ ಪೊಟ್ರೊ ಎದುರಾಳಿ ನಿಕೊಲಸ್ ಅಲ್ಮಾಗ್ರೊ ಗಾಯಗೊಂಡು ನಿವೃತ್ತಿಯಾದ ಹಿನ್ನೆಲೆಯಲ್ಲಿ 3ನೆ ಸುತ್ತಿಗೆ ತಲುಪಿದರು.
ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ ಪೋರ್ಚುಗಲ್‌ನ ಜೊಯಾವೊ ಸೌಸಾರನ್ನು 6-1, 6-4, 6-3 ಸೆಟ್‌ಗಳ ಅಂತರದಿಂದ ಮಣಿಸುವುದರೊಂದಿಗೆ ಫ್ರೆಂಚ್ ಓಪನ್‌ನಲ್ಲಿ ಮೂರನೆ ಸುತ್ತಿಗೆ ತಲುಪಿದ್ದಾರೆ. ಜೊಕೊವಿಕ್ ಮುಂದಿನ ಸುತ್ತಿನಲ್ಲಿ ಅರ್ಜೆಂಟೀನದ ಡಿಯಾಗೊ ಸ್ಚೆವಾರ್ಟ್‌ಮನ್‌ರನ್ನು ಎದುರಿಸಲಿದ್ದಾರೆ.
ಸಿಬುಲ್ಕೋವಾಗೆ ಜಬ್‌ಯುರ್ ಶಾಕ್
ಪ್ಯಾರಿಸ್, ಜೂ.1: ಆರನೆ ಶ್ರೇಯಾಂಕದ ಡೊಮಿನಿಕಾ ಸಿಬುಲ್ಕೋವಾರನ್ನು ಮಣಿಸಿದ ಟುನಿಸಿಯದ ಆನ್ಸ್ ಜಬ್‌ಯುರ್ ಫ್ರೆಂಚ್ ಓಪನ್‌ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಮೂರನೆ ಸುತ್ತಿಗೆ ತೇರ್ಗಡೆಯಾಗಿದ್ದಾರೆ. ಜಬ್‌ಯುರ್ ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ 3ನೆ ಸುತ್ತಿಗೆ ತಲುಪಿದ ಅರಬ್‌ನ ಮೊದಲ ಮಹಿಳಾ ಟೆನಿಸ್ ತಾರೆಯಾಗಿದ್ದಾರೆ.
114ನೆ ರ್ಯಾಂಕಿನ ಜಬ್‌ಯುರ್ ಅದೃಷ್ಟದ ಬಲದಿಂದ ಪ್ರಮುಖ ಸುತ್ತಿಗೆ ತಲುಪಿದ್ದರು. ಅರ್ಹತಾ ಸುತ್ತಿನಲ್ಲಿ ಎದುರಾಳಿ ಆಟಗಾರ್ತಿ ಜರ್ಮನಿಯ ಲೌರಾ ಸಿಗ್‌ಮಂಡ್ ಗಾಯಗೊಂಡು ಟೂರ್ನಿಯಿಂದ ಹಿಂದೆ ಸರಿದ ಹಿನ್ನೆಲೆಯಲ್ಲಿ ಜಬ್‌ಯುರ್ ಮುಂದಿನ ಸುತ್ತಿಗೇರಿದ್ದರು.
ಫ್ರೆಂಚ್ ಓಪನ್‌ನಲ್ಲಿ 3ನೆ ಸುತ್ತಿಗೆ ತಲುಪಿರುವ ಜಬ್‌ಯುರ್ ಅವರು ಸಹ ಆಟಗಾರ್ತಿ ಸೆಲಿಮಾ ಸಫರ್ ದಾಖಲೆಯನ್ನು ಸರಿಗಟ್ಟಿದರು. ಸೆಲಿಮಾ ಫ್ರೆಂಚ್ ಓಪನ್‌ನಲ್ಲಿ 2 ಬಾರಿ, ವಿಂಬಲ್ಡನ್‌ನಲ್ಲಿ 3 ಬಾರಿ ಹಾಗೂ ಯುಎಸ್ ಓಪನ್‌ನಲ್ಲಿ ಒಂದು ಬಾರಿ ಎರಡನೆ ಸುತ್ತಿಗೆ ತಲುಪಿದ್ದರು.
2011ರಲ್ಲಿ ಫ್ರೆಂಚ್ ಓಪನ್ ಗರ್ಲ್ಸ್ ಚಾಂಪಿಯನ್ ಆಗಿದ್ದ 22ರ ಹರೆಯದ ಜಬ್‌ಯುರ್ ಮುಂದಿನ ಸುತ್ತಿನಲ್ಲಿ ಸ್ವಿಸ್‌ನ 30ನೆ ಶ್ರೇಯಾಂಕಿತೆ ಟಿಮಿಯಾ ಬಾಸಿನ್‌ಸ್ಕಿ ಅವರನ್ನು ಎದುರಿಸಲಿದ್ದಾರೆ.
ರಾಂಡ್ವಾಂಸ್ಕಾ, ಸ್ವಿಟೋಲಿನಾಗೆ ಜಯ
ಪ್ಯಾರಿಸ್, ಜೂ.1: ‘ಪ್ರೊಫೆಸರ್’ ಎಂಬ ಅಡ್ಡನಾಮದಿಂದ ಪ್ರಸಿದ್ಧರಾಗಿರುವ 9ನೆ ಶ್ರೇಯಾಂಕದ ಅಗ್ನೆಸ್ಕಾ ರಾಂಡ್ವಾಂಸ್ಕಾ, ಈ ವರ್ಷದ ಶ್ರೇಷ್ಠ ಸಿಂಗಲ್ಸ್ ಆಟಗಾರ್ತಿ ಎಲಿನಾ ಸ್ವಿಟೊಲಿನಾ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಮೂರನೆ ಸುತ್ತಿಗೆ ತಲುಪಿದ್ದಾರೆ.
ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಎರಡನೆ ಸುತ್ತಿನ ಪಂದ್ಯದಲ್ಲಿ ಪೊಲೆಂಡ್ ಆಟಗಾರ್ತಿ ರಾಂಡ್ವಾಂಸ್ಕಾ ಬೆಲ್ಜಿಯಂನ ಅಲಿಸನ್ ವ್ಯಾನ್ ಯುಟ್ವಾನಕ್‌ರನ್ನು 6-7(3), 6-2, 6-3 ಸೆಟ್‌ಗಳ ಅಂತರದಿಂದ ಮಣಿಸಿದ್ದಾರೆ.
2012ರ ವಿಂಬಲ್ಡನ್ ಟೂರ್ನಿಯಲ್ಲಿ ಫೈನಲ್‌ಗೆ ತಲುಪಿದ್ದ ರಾಂಡ್ವಾಂಸ್ಕಾ ತನ್ನ ಆಟದ ತಂತ್ರದಲ್ಲಿ ಬದಲಾವಣೆ ಮಾಡಿ ಎದುರಾಳಿ ಆಟಗಾರ್ತಿಯನ್ನು ಸುಲಭವಾಗಿ ಮಣಿಸಿದರು.
ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಮೊದಲ ಸೆಟ್ ಸೋಲಿನಿಂದ ಚೇತರಿಸಿಕೊಂಡ ಉಕ್ರೇನ್‌ನ ನಂ.6ನೆ ಆಟಗಾರ್ತಿ ಎಲಿನಾ ಸ್ವಿಟೋಲಿನಾ ಬೆಲ್ಜಿಯಂನ ಸ್ವೆಟಾನಾ ಪಿರೊಂಕೊವಾರನ್ನು 3-6, 6-3, 6-2 ಸೆಟ್‌ಗಳಿಂದ ಮಣಿಸಿ ಮೂರನೆ ಸುತ್ತಿಗೆ ತಲುಪಿದ್ದಾರೆ.







