ಬೆಳ್ತಂಗಡಿ: ವಿದ್ಯಾರ್ಥಿಯಿಂದ ಬಿಎಸ್ಎನ್ಎಲ್ ಉದ್ಯೋಗಿಯ ಕೊಲೆ

ತಿಮ್ಮಪ್ಪ ಪೂಜಾರಿ
ಬೆಳ್ತಂಗಡಿ, ಜೂ.2: ಇಲ್ಲಿನ ಸಂತೆಕಟ್ಟೆಯಲ್ಲಿ ವಿದ್ಯಾರ್ಥಿಯೋರ್ವ ವ್ಯಕ್ತಿಯೋರ್ವರನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಹತ್ಯೆಗೈದು ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ಶರಣಾದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ.
ಮೃತ ವ್ಯಕ್ತಿಯನ್ನು ಬೆಳ್ತಂಗಡಿ ಬಿಎಸ್ಎನ್ಎಲ್ನ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ತಿಮ್ಮಪ್ಪ ಪೂಜಾರಿ (50) ಎಂದು ಗುರುತಿಸಲಾಗಿದೆ. ನೆರೆ ಮನೆಯ ನಿವಾಸಿ, ದ್ವಿತೀಯ ಬಿಬಿಎಂ ವಿದ್ಯಾರ್ಥಿ ಚಂದ್ರಶೇಖರ (20) ಕೊಲೆ ಆರೋಪಿ ಎಂದು ಗುರುತಿಸಲಾಗಿದೆ.
ಕೊಲೆಗೆ ಕಾರಣವೇನು ಎಂಬ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿಗಳು ಲಭ್ಯವಾಗಿಲ್ಲ. ನೀರಿನ ವಿವಾದವೊಂದು ಇವರ ನಡುವೆ ಇತ್ತು ಎಂದು ಹೇಳಲಾಗುತ್ತಿದ್ದರೂ, ಅದು ಕೊಲೆಯ ಹಂತಕ್ಕೆ ಬರಲು ಸಾಧ್ಯವಿಲ್ಲ ಎಂಬುದು ಸ್ಥಳೀಯರ ಅಭಿಪ್ರಾಯ.
ಇಂದು ರಾತ್ರಿ ಮನೆಯಲ್ಲಿದ್ದ ಕತ್ತಿಯೊಂದಿಗೆ ತಿಮ್ಮಪ್ಪ ಪೂಜಾರಿಗಾಗಿ ಕಾದು ನಿಂತ ಚಂದ್ರಶೇಖರ ಅವರ ಮೇಲೆ ದಾಳಿ ನಡೆಸಿದ್ದಾನೆ.
ಕತ್ತಿಯೇಟಿಗೆ ಕುಸಿದು ಬಿದ್ದ ತಿಮ್ಮಪ್ಪನ ಮೇಲೆ ಚಂದ್ರಶೇಖರ ಭೀಕರ ದಾಳಿ ನಡೆಸಿದ್ದು, ಕತ್ತಿಯಿಂದ ತಲೆ ಮುಖ ಹಾಗೂ ದೇಹದ ಮೇಲೆಲ್ಲ ಮನಬಂದಂತೆ ಕಡಿದಿದ್ದಾನೆ. ಇದರಿಂದ ತಿಮ್ಮಪ್ಪ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬಳಿಕ ಚಂದ್ರಶೇಖರ ನೇರವಾಗಿ ಬೆಳ್ತಂಗಡಿ ಪೊಲೀಸ್ ಠಾಣೆಗೆ ತೆರಳಿ ತಾನು ತಿಮ್ಮಪ್ಪನನ್ನು ಹತ್ಯೆ ಮಾಡಿರುವುದಾಗಿ ತಿಳಿಸಿದ್ದಾನೆ. ತಕ್ಷಣವೇ ಪೋಲಿಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದು, ನಂತರ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಿಎಸ್ಎನ್ಎಲ್ ಉದ್ಯೋಗಿಯಾಗಿರುವ ತಿಮ್ಮಪ್ಪ ಅವರು ಮೂಲತಃ ಮೂಡಿಗೆರೆಯವರಾಗಿದ್ದು ಕಳೆದ ಹಲವು ವರ್ಷಗಳಿಂದ ಬೆಳ್ತಂಗಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಒಂದೇ ಕಟ್ಟಡದಲ್ಲಿರುವ ಒಂದಕ್ಕೊಂದು ತಾಗಿಕೊಂಡಿರುವ ಎರಡು ಮನೆಗಳಲ್ಲಿ ಈ ಎರಡು ಕುಟುಂಬಗಳು ವಾಸಿಸುತ್ತಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ. ಕೊಲೆಗೆ ಸ್ಪಷ್ಟವಾದ ಕಾರಣಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.







