ಕೋಟ್ಯಂತರ ರೂ. ಅವ್ಯವಹಾರದ ಆರೋಪ
ಮೀಸಲು ಅರಣ್ಯದಲ್ಲಿ ಸಾರ್ವಜನಿಕ ಪಾರ್ಕ್ ನಿರ್ಮಾಣ
ಚಿಕ್ಕಮಗಳೂರು, ಜೂ.2: ಅರಣ್ಯ ಇಲಾಖೆ ಮೀಸಲು ಅರಣ್ಯ ನಾಶಪಡಿಸಿ ಸಾರ್ವಜನಿಕ ಪಾರ್ಕ್ ನಿರ್ಮಾಣ ಯೋಜನೆಗೆ ಕೈಹಾಕಿರುವುದು ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ. ಕಡೂರು ರಸ್ತೆಯಲ್ಲಿ ಪವಿತ್ರವನ ಯೋಜನೆಯ ಹೆಸರಿನಲ್ಲಿ ಅರಣ್ಯ ಪ್ರದೇಶದಲ್ಲಿ ಅನೇಕ ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಅರಣ್ಯಾಧಿಕಾರಿಗಳ ನಡೆಗೆ ಪರಿಸರಾಸಕ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಅರಣ್ಯ ಇಲಾಖೆಯು ಸಿವಿಲ್ ಕಾಮಗಾರಿಗಳ ಅನುಷ್ಠಾನಗಳಲ್ಲಿ ಪ್ರಖ್ಯಾತಿ ಪಡೆಯುತ್ತಿದೆ. ಅರಣ್ಯ ಸಂರಕ್ಷಣೆಯೊಂದನ್ನು ಬಿಟ್ಟು ಉಳಿದೆಲ್ಲ ಸಿವಿಲ್ ಕಾಮಗಾರಿಗಳನ್ನು ಕೈಗೊಳ್ಳಲು ಇಲಾಖಾ ಅಧಿಕಾರಿಗಳು ಉತ್ಸಾಕರಾಗಿದ್ದಾರೆ.
ಪವಿತ್ರವನ ಅರಣ್ಯದಲ್ಲಿ ಅರಣ್ಯ ಇಲಾಖೆ ಮನಸೋಇಚ್ಛೆ ಮರಗಿಡಗಳನ್ನು ಕಡಿದು ಕೃತಕವಾಗಿ ಪಾರ್ಕ್ ಹಾಗೂ ಕಟ್ಟಡಗಳ ನಿರ್ಮಾಣ, ಸುತ್ತಲಿನ ಅರಣ್ಯ ಪ್ರದೇಶಕ್ಕೆ ಚೈನ್‌ಲಿಂಕ್ ಮೆಷ್ ಬೇಲಿ ಅಳವಡಿಸುತ್ತಿರುವುದು, ಹೊಸ ರಸ್ತೆಗಳ ನಿರ್ಮಾಣ, ಮಕ್ಕಳ ಆಟಕ್ಕಾಗಿ ಸಾಕಷ್ಟು ಆಟಿಕೆಗಳನ್ನು ಅಳವಡಿಸುತ್ತಿರುವುದು ಕಂಡುಬಂದಿದೆ ಎಂದು ಭದ್ರಾ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಿ.ವಿ. ಗಿರೀಶ್, ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಲ್ಲಿ ಅರಣ್ಯ ಇಲಾಖೆಯೇ ಅಕ್ಷರಶಃ ಮೀಸಲು ಅರಣ್ಯವನ್ನು ಬಲಿಕೊಟ್ಟಿದೆ. ಅರಣ್ಯ ಇಲಾಖೆಯ ನಾಮಫಲಕದಲ್ಲಿ ತಿಳಿಸಿರುವಂತೆ ರಕ್ಷಿತ ಅರಣ್ಯ ಪ್ರದೇಶದಲ್ಲಿ ನಗರ ಪವಿತ್ರವನ 2016ರ ಯೋಜನೆಯಲ್ಲಿ ‘ಇಲ್ಲಿ ಸಾರ್ವಜನಿಕರು ತ್ಯಾಜ್ಯ ಹಾಕಬಾರದು.’ ‘ರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಶಿಕ್ಷೆಗೆ ಒಳಪಡಿಸಲಾಗುವುದು’ ಎಂದು ತಿಳಿಸಲಾಗಿದೆ.
ಆದರೆ ಅರಣ್ಯ ಇಲಾಖೆ ಮಾತ್ರ ರಕ್ಷಿತ ಅರಣ್ಯ ಪ್ರದೇಶದಲ್ಲಿ ಸಾಕಷ್ಟು ಅರಣ್ಯೇತರ ಚಟುವಟಿಕೆಗಳನ್ನು ಕೈಗೊಳ್ಳುವುದರ ಮೂಲಕ ಅರಣ್ಯ ಸಂರಕ್ಷಣಾ ಕಾಯ್ದೆ ಹಾಗೂ ಕಾನೂನುಗಳನ್ನು ಗಾಳಿಗೆ ತೂರಿದೆ ಎಂದು ದೂರಲಾಗಿದೆ.
ಅರಣ್ಯ ಇಲಾಖೆ ಇತ್ತೀಚೆಗೆ ವನ ಹಾಗೂ ಪಾರ್ಕ್‌ಗಳ ಯೋಜನೆಗಳನ್ನು ಮನಸ್ಸಿಗೆ ಬಂದಂತೆ ಕೈಗೊಂಡಿದೆ. ಗಾಲ್ಫ್ ಕ್ಲಬ್ ರಸ್ತೆಯಲ್ಲಿ ಟ್ರಿಪಾರ್ಕ್ ಯೋಜನೆ, ಕಡೂರು ರಸ್ತೆ ಅರಣ್ಯ ಪ್ರದೇಶದಲ್ಲಿ ಸಿರಿಚಂದನವನ ಯೋಜನೆ, ಮೂಡಿಗೆರೆ ರಸ್ತೆಯ ಕೆಳಗೂರು ಸಮೀಪ ಸಂಜೀವಿನಿವನ ಯೋಜನೆ ಹಾಗೂ ಚಿಕ್ಕಮಗಳೂರು ನಗರ ಪವಿತ್ರವನ ಯೋಜನೆ ಹೆಸರಿನಲ್ಲಿ ಸಾಕಷ್ಟು ಸಿವಿಲ್ ಕಾಮಗಾರಿಗಳನ್ನು ಕೈಗೊಂಡಿದೆ. ಅರಣ್ಯಕ್ಕೆ ಬೇಲಿ ಅಳವಡಿಸಲಾಗಿದ್ದು, ಅಲ್ಲಿ ಯಾವುದೇ ಗಿಡಗಳನ್ನು ನೆಟ್ಟು ಪೋಷಿಸುವ ಕೆಲಸಕ್ಕೂ ಕೈಹಾಕದೇ ಸಾಕಷ್ಟು ಕಟ್ಟಡಗಳನ್ನು ನಿರ್ಮಿಸಿ, ಅರಣ್ಯಗಳಲ್ಲಿ ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದು ಆಪಾದಿಸಿದ್ದಾರೆ.
ಈ ಎಲ್ಲ ನಕಲಿ ಯೋಜನೆಗಳನ್ನು ಕೂಡಲೇ ಅರಣ್ಯ ಇಲಾಖೆಯ ರಾಜ್ಯಮಟ್ಟದ ಅಧಿಕಾರಿಗಳು ಗಮನಿಸಿ ನಿಲ್ಲಿಸಬೇಕು. ಅರಣ್ಯಕ್ಕೆ ಉಪಯೋಗವಿಲ್ಲದ ಇಂತಹ ಯೋಜನೆಗಳಿಗೆ ಸರಕಾರ ಅವಕಾಶ ಕೊಡಬಾರದು.
ಸದ್ಯ ನಡೆಯುತ್ತಿರುವ ಯೋಜನೆಗಳನ್ನು ಕೈಬಿಟ್ಟು ಅರಣ್ಯವನ್ನು ನೈಸರ್ಗಿಕವಾಗಿಯೇ ಉಳಿಯುವಂತೆ ಅವುಗಳ ಸಂರಕ್ಷಣೆಗೆ ಮಾತ್ರ ಒತ್ತು ನೀಡಬೇಕೆಂದು ಭದ್ರಾ ವನ್ಯಜೀವಿ ಸಂರಕ್ಷಣಾ ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಡಿ.ವಿ. ಗಿರೀಶ್, ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತ ಜಿ.ವೀರೇಶ್ ಒತ್ತಾಯಿಸಿದ್ದಾರೆ.







