ಹುತಾತ್ಮ ಯೋಧನ ಪತ್ನಿಯನ್ನು ಅಪಮಾನಿಸಿದ ಹರ್ಯಾಣ ಸರಕಾರ
ಹೊಸದಿಲ್ಲಿ, ಜೂ.2: ಪರಿಹಾರ ರೂಪದಲ್ಲಿ ಉದ್ಯೋಗ ನೀಡಬೇಕೆಂದು ಹರ್ಯಾಣ ಸರಕಾರಕ್ಕೆ ಕೋರಿಕೆ ಸಲ್ಲಿಸಿದ್ದ ಸೇನೆಯ ಹುತಾತ್ಮ ಯೋಧನ ಪತ್ನಿಯನ್ನು ಸರಕಾರ ಅಪಮಾನಿಸಿದ ಘಟನೆ ವರದಿಯಾಗಿದೆ.
ತನ್ನ ಮೈದುನನನ್ನು ವಿವಾಹವಾಗಿಲ್ಲ ಮತ್ತು ಮುಂದಿನ ದಿನದಲ್ಲಿ ಆತನನ್ನು ವರಿಸುವುದಿಲ್ಲ ಎಂದು ಮುಚ್ಚಳಿಕೆ ನೀಡುವಂತೆ ಸರಕಾರ ಆಕೆಗೆ ತಿಳಿಸಿದೆ. ಸಿಖ್ ರೆಜಿಮೆಂಟ್‌ನ ಯೋಧ ಮಂದೀಪ್ ಸಿಂಗ್ ಎಂಬಾತ 2016ರಲ್ಲಿ ಕಾಶ್ಮೀರದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಘರ್ಷಣೆಯ ಸಂದರ್ಭ ಹುತಾತ್ಮನಾಗಿದ್ದ. ಈತನ ತಲೆಯನ್ನು ಕತ್ತರಿಸಿ ಮೃತದೇಹವನ್ನು ವಿರೂಪಗೊಳಿಸಲಾಗಿತ್ತು. ಈತನ ಪತ್ನಿ ಪ್ರೇರಣಾ ಹರ್ಯಾಣ ಪೊಲೀಸ್ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿದ್ದಾರೆ. ಯೋಧ ಹುತಾತ್ಮನಾದ ಸಂದರ್ಭದಲ್ಲಿ ಈಕೆಗೆ ಇನ್‌ಸ್ಪೆಕ್ಟರ್ ಹುದ್ದೆಗೆ ಭಡ್ತಿ ಮತ್ತು ಈಕೆಯ ಮೈದುನ (ಮೃತ ಯೋಧನ ಸಹೋದರ)ನಿಗೆ ಸರಕಾರಿ ಉದ್ಯೋಗವನ್ನು ನೀಡುವುದಾಗಿ ರಾಜ್ಯ ಸರಕಾರ ಘೋಷಿಸಿತ್ತು. ಆದರೆ ಭಡ್ತಿ ನೀಡುವುದು ಹಾಗಿರಲಿ, ತನ್ನನ್ನು ಸತತವಾಗಿ ಅಪಮಾನ ಮಾಡಲಾಗುತ್ತಿದೆ ಎಂದು ಪ್ರೇರಣಾ ಹೇಳಿದ್ದಾರೆ.
ಇತ್ತೀಚೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹರ್ಯಾಣಕ್ಕೆ ಭೇಟಿ ನೀಡಿದ್ದಾಗ ಅವರ ಭದ್ರತೆಗೆಂದು ನಿಯೋಜಿಸಲಾಗಿದ್ದ ತಂಡದಲ್ಲಿದ್ದ ಪ್ರೇರಣಾರನ್ನು ಬದಲಿಸಲಾಗಿತ್ತು. ಕೇಂದ್ರ ಗೃಹ ಸಚಿವರ ಭದ್ರತಾ ತಂಡದಲ್ಲಿ ಓರ್ವ ಹುತಾತ್ಮ ಯೋಧನ ಪತ್ನಿ ಇದ್ದರೆ ಸಮಸ್ಯೆ ಆದೀತು ಎಂದು ಅವರು ಭಾವಿಸಿರಬಹುದು ಎಂದು ಪ್ರೇರಣಾ ಅಳಲು ತೋಡಿಕೊಂಡಿದ್ದಾರೆ. ಆದರೆ ಪ್ರೇರಣಾಗೆ ಸರಕಾರ ಈ ರೀತಿಯ ಷರತ್ತು ವಿಧಿಸಿಲ್ಲ ಎಂದು ಸೈನಿಕ್ ಕಲ್ಯಾಣ ಮಂಡಳಿ ತಿಳಿಸಿದೆ. ಮಂದೀಪ್‌ನ ಸೋದರ ಸಂದೀಪ್‌ಗೆ ಸರಕಾರಿ ಉದ್ಯೋಗ ನೀಡಲಾಗುವುದು. ಅಲ್ಲದೆ ಹುತಾತ್ಮ ಯೋಧನ ಕುಟುಂಬಕ್ಕೆ ಈಗಾಗಲೇ 50 ಲಕ್ಷ ರೂ. ಪರಿಹಾರ ಧನ ನೀಡಲಾಗಿದೆ ಎಂದು ಸರಕಾರ ತಿಳಿಸಿದೆ.







