ಚಿತ್ರರಂಗಕ್ಕೆ "ಗುಡ್ ಬೈ" ಹೇಳಲಿದ್ದಾರಂತೆ ನಟ ಕಮಲ್ ಹಾಸನ್!

ಚೆನ್ನೈ, ಜೂ.2: ಕೇಂದ್ರ ಸರಕಾರದ ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯ ವಿರುದ್ಧ ಉದ್ಯಮಿಗಳು ಮಾತ್ರವಲ್ಲ ಚಿತ್ರರಂಗವೂ ಸಿಡಿದೆದ್ದಿದೆ. ಇದೀಗ ಜಿ.ಎಸ್.ಟಿ. ವಿರುದ್ಧ ದಕ್ಷಿಣ ಭಾರತದ ಶ್ರೇಷ್ಠ ನಟ ಕಮಲ್ ಹಾಸನ್ ತಿರುಗಿ ಬಿದ್ದಿದ್ದಾರೆ. ಕೇಂದ್ರದ ಈ ಅವೈಜ್ಞಾನಿಕ ತೆರಿಗೆ ಪದ್ಧತಿಯನ್ನು ಕೈಬಿಡದಿದ್ದರೆ ತಾವು ಚಿತ್ರರಂಗಕ್ಕೆ ಗುಡ್ ಬೈ ಹೇಳುವುದಾಗಿ ಅವರು ಹೇಳಿದ್ದಾರೆ.
ಚೆನ್ನೈಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿದ ಕಮಲ್ ಹಾಸನ್ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಜಿ.ಎಸ್.ಟಿ. ಜಾರಿಗೆ ಬಂದರೆ ಸಿನೆಮಾ ಟಿಕೆಟ್ ಮೇಲೆ ಶೇ.28ರಷ್ಟು ತೆರಿಗೆ ಬೀಳಲಿದೆ. ಈ ರೀತಿಯ ತೆರಿಗೆ ವಿಧಿಸುವ ಕ್ರಮ ಆಘಾತಕಾರಿಯಾಗಿದ್ದು, ಇದನ್ನು ಚಿತ್ರೋದ್ಯಮದ ಸಹಿಸುವುದಿಲ್ಲ. ಇಂತಹ ತೆರಿಗೆ ನೀತಿಯನ್ನು ಹಾಲಿವುಡ್ ಸಹಿಸಿಕೊಳ್ಳಬಹುದು, ಆದರೆ ನಾವು ಸಹಿಸಿಕೊಳ್ಳುವುದಿಲ್ಲ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಚಿತ್ರೋದ್ಯಮದ ಮೇಲಿನ ಜಿ.ಎಸ್.ಟಿ. ಪ್ರಹಾರವನ್ನು ಕೇಂದ್ರ ಸರಕಾರ ಕೈಬಿಡಬೇಕು. ಇಲ್ಲವೇ ತೆರಿಗೆ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ಕೇಂದ್ರ ಸರಕಾರವನ್ನು ಕಮಲ್ ಹಾಸನ್ ಒತ್ತಾಯಿಸಿದ್ದಾರೆ.





