ಕ್ರಿಕೆಟ್‌ಗಾಗಿ ಸ್ನೇಹಕ್ಕೆ ತಾತ್ಕಾಲಿಕ ವಿರಾಮ ನೀಡಿದ ಬೋಪಣ್ಣ-ಖುರೇಶಿ

ಪ್ಯಾರಿಸ್, ಜೂ.2: 2010ರ ವಿಂಬಲ್ಡನ್ ಟೂರ್ನಿಯಲ್ಲಿ ‘ಸ್ಟಾಪ್ ವಾರ್, ಸ್ಟಾರ್ಟ್ ಟೆನಿಸ್’ ಎಂದು ಬರೆದಿದ್ದ ಟೀ-ಶರ್ಟ್ ಧರಿಸಿ ಭಾರತ ಹಾಗೂ ಪಾಕಿಸ್ತಾನ ನಡುವೆ ಶಾಂತಿ ನೆಲೆಗೊಳಿಸುವಂತೆ ವಿನಂತಿಸಿದ್ದ ಬಾಲ್ಯದ ಗೆಳೆಯರಾದ ರೋಹನ್ ಬೋಪಣ್ಣ ಹಾಗೂ ಐಸಾಮ್-ಉಲ್-ಹಕ್ ಖುರೇಶಿ ರವಿವಾರದ ಮಟ್ಟಿಗೆ ಸುಮಾರು 8 ಗಂಟೆಗಳ ಕಾಲ ಸ್ನೇಹಕ್ಕೆ ತಾತ್ಕಾಲಿಕ ವಿರಾಮ ನೀಡಲಿದ್ದಾರೆ.
ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡ ರವಿವಾರ ಮುಖಾಮುಖಿಯಾಗಲಿದ್ದು, ಬೋಪಣ್ಣ ಅವರು ಭಾರತವನ್ನೂ, ಖುರೇಶಿ ಪಾಕ್ ತಂಡವನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ. 1980ರಲ್ಲಿ ಜನಿಸಿರುವ ಕೊಡಗು ಮೂಲದ ಬೋಪಣ್ಣ ಹಾಗೂ ಪಾಕ್‌ನ ಖುರೇಶಿ 16ರ ಹರೆಯದಲ್ಲಿ ಮೊದಲ ಬಾರಿ ಭೇಟಿಯಾಗಿದ್ದರು. ಆಗ ಚಿಗುರಿದ್ದ ಅವರ ಸ್ನೇಹ ಈಗಲೂ ಉಳಿದುಕೊಂಡಿದೆ.
‘‘ರೋಹನ್ ಅವರು ಮೈದಾನದ ಒಳಗೆ ಹಾಗೂ ಹೊರಗೆ ನನ್ನ ಸಹೋದರನಿದ್ದಂತೆ. ಉಭಯ ದೇಶದಲ್ಲಿ ರಾಜಕೀಯ ಭಿನ್ನಾಭಿಪ್ರಾಯವಿದ್ದರೂ, ನಮ್ಮಾಳಗೆ ಅದ್ಯಾವುದೂ ಇಲ್ಲ. ನಾವಿಬ್ಬರೂ ಪರಸ್ಪರ ಗೌರವ ನೀಡುತ್ತೇವೆ. ಅವರು ಪಾಕಿಸ್ತಾನವನ್ನು ಬೆಂಬಲಿಸಬೇಕೆಂದು ನಾನು ನಿರೀಕ್ಷಿಸುತ್ತಿಲ್ಲ. ನಾನು ಭಾರತವನ್ನು ಬೆಂಬಲಿಸಬೇಕೆಂದು ಅವರು ನಿರೀಕ್ಷಿಸುತ್ತಿಲ್ಲ. ನಾವಿಬ್ಬರೂ ಟೆನಿಸ್ ಪಟುಗಳಾಗುವ ಮೊದಲು ಕ್ರಿಕೆಟ್ ಆಡುತ್ತಿದ್ದೆವು’’ಎಂದು ಖುರೇಶಿ ಹೇಳಿದ್ದಾರೆ.
‘‘ದಕ್ಷಿಣ ಆಫ್ರಿಕದಲ್ಲಿ 2007ರಲ್ಲಿ ನಡೆದಿದ್ದ ಟ್ವೆಂಟಿ-20 ವಿಶ್ವಕಪ್ ಫೈನಲ್ ಪಂದ್ಯವನ್ನು ಮುಂಬೈನಲ್ಲಿ ನಾವಿಬ್ಬರೂ ಒಟ್ಟಿಗೆ ವೀಕ್ಷಿಸಿದ್ದೆವು. ಆ ಪಂದ್ಯವನ್ನು ಭಾರತ 5 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು. ಪಂದ್ಯವನ್ನು ವೀಕ್ಷಿಸಿದ ಬಳಿಕ ಜೊತೆಯಾಗಿ ಡಬಲ್ಸ್ ಪಂದ್ಯವನ್ನು ಆಡಿದ್ದೆವು. ನಾವು ಟೆನಿಸ್ ಕೋರ್ಟ್‌ನಲ್ಲಿದ್ದಾಗ ನಮ್ಮ ಗಮನ ಪಂದ್ಯವನ್ನು ಗೆಲ್ಲುವುದರತ್ತ ಇರುತ್ತಿತ್ತು’’ ಎಂದು ರೋಹನ್ ಬೋಪಣ್ಣ ಹೇಳಿದ್ದಾರೆ.







