ವೆಸ್ಟ್‌ಇಂಡೀಸ್ ಕ್ರಿಕೆಟ್ ತಂಡದ ಹೆಸರು ಬದಲಾವಣೆ
ಜಮೈಕಾ, ಜೂ.2: ತನ್ನ 91ನೆ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ವೆಸ್ಟ್‌ಇಂಡೀಸ್ ಕ್ರಿಕೆಟ್ ಮಂಡಳಿಯು ತನ್ನ ಹೆಸರನ್ನು ‘ಕ್ರಿಕೆಟ್ ವೆಸ್ಟ್‌ಇಂಡೀಸ್’ ಎಂದು ಬದಲಾಯಿಸಿಕೊಂಡಿದ್ದಲ್ಲದೆ, ಕ್ರಿಕೆಟ್ ತಂಡದ ಹೆಸರನ್ನು ವೆಸ್ಟ್‌ಇಂಡೀಸ್ ಬದಲಿಗೆ ‘ವಿಂಡೀಸ್’ ಎಂದು ಮರು ನಾಮಕರಣ ಮಾಡಿದೆ. ವಿಂಡೀಸ್ ಎಂಬ ಹೆಸರನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ.
ಒಂದು ಕಾಲದಲ್ಲಿ ವಿಶ್ವದ ಶ್ರೇಷ್ಠ ಕ್ರಿಕೆಟ್ ತಂಡವಾಗಿದ್ದ ವೆಸ್ಟ್‌ಇಂಡೀಸ್ ಇತ್ತೀಚೆಗಿನ ವರ್ಷಗಳಲ್ಲಿ ವಿವಾದಗಳಿಂದಲೇ ಸುದ್ದಿಯಾಗಿದೆ. ಡ್ವೆಯ್ನೆ ಬ್ರಾವೊ, ಕ್ರಿಸ್ ಗೇಲ್, ಡರನ್ ಸಮ್ಮಿ ಮತ್ತಿತರ ಪ್ರಮುಖ ಆಟಗಾರರು ವೇತನಕ್ಕೆ ಸಂಬಂಧಿಸಿ ಕ್ರಿಕೆಟ್ ಮಂಡಳಿಯೊಂದಿಗೆ ದೀರ್ಘ ಸಮಯದಿಂದ ಭಿನ್ನಾಭಿಪ್ರಾಯ ಹೊಂದಿದ್ದಾರೆ. ಈ ಎಲ್ಲ ಆಟಗಾರರನ್ನು ಹೊರಗಿಟ್ಟು ಕ್ರಿಕೆಟ್ ಮಂಡಳಿ ಆಟಗಾರರ ವೇತನವನ್ನು ನಿಗದಿಪಡಿಸಿತ್ತು.
ಈ ವರ್ಷ ವೆಸ್ಟ್‌ಇಂಡೀಸ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲು ವಿಫಲವಾಗಿದೆ. ಏಕದಿನ ಕ್ರಿಕೆಟ್‌ನಲ್ಲಿ ಸತತ ಸೋಲನುಭವಿಸಿರುವ ವೆಸ್ಟ್‌ಇಂಡೀಸ್ 2019ರ ಐಸಿಸಿ ವಿಶ್ವಕಪ್‌ಗೆ ನೇರ ಪ್ರವೇಶ ಪಡೆಯುವ ಅವಕಾಶ ವಂಚಿತವಾಗುವ ಭೀತಿಯಲ್ಲಿದೆ.





