ಜಾರಿ ಬಿದ್ದ ಗಫಿನ್, ಮೂರನೆ ಸುತ್ತಿನಲ್ಲಿ ಗಾಯಾಳು ನಿವೃತ್ತಿ

ಪ್ಯಾರಿಸ್, ಜೂ.2: ಫ್ರೆಂಚ್ ಓಪನ್‌ನ ಮೂರನೆ ಸುತ್ತಿನ ಪಂದ್ಯ ಆಡುತ್ತಿದ್ದಾಗ ಜಾರಿ ಬಿದ್ದು ಮಂಡಿ ನೋವಿಗೆ ಒಳಗಾದ ಬೆಲ್ಜಿಯಂ ಆಟಗಾರ ಡೇವಿಡ್ ಗಫಿನ್ ಪಂದ್ಯದಿಂದ ಹಿಂದೆ ಸರಿದರು.
ಫಾರ್ಮ್‌ನಲ್ಲಿರುವ 12ನೆ ರ್ಯಾಂಕಿನ ಆಟಗಾರ ಗಫಿನ್ ಅರ್ಜೆಂಟೀನದ ಹೊರಾಸಿಯೊ ಝೆಬಲ್ಲಾಸ್ ವಿರುದ್ಧ 5-4 ಮುನ್ನಡೆಯಲ್ಲಿದ್ದಾಗ ಜಾರಿಬಿದ್ದು ಗಾಯಮಾಡಿಕೊಂಡರು.
ಈ ವರ್ಷದ ಮಾಂಟೆಕಾರ್ಲೊ ಟೂರ್ನಿಯಲ್ಲಿ ಸೆಮಿಫೈನಲ್‌ಗೆ ತಲುಪಿದ್ದ ಗಫಿನ್ ಅರ್ಜೆಂಟೀನದ ಆಟಗಾರನ ವಿರುದ್ಧ ಚೆಂಡನ್ನು ಬಾರಿಸುವ ಸಂದರ್ಭದಲ್ಲಿ ಜಾರಿ ಬಿದ್ದರು. ಈ ಘಟನೆ ನಡೆದ ತಕ್ಷಣ ವೈದ್ಯಕೀಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿಕಿತ್ಸೆ ನೀಡಿತು. ಕೆಲವೇ ನಿಮಿಷದ ಬಳಿಕ ಅಂಪೈರ್ ಅವರು 26ರ ಹರೆಯದ ಗಫಿನ್ ಗಾಯಾಳು ನಿವೃತ್ತಿಯಾಗುತ್ತಿರುವುದಾಗಿ ಘೋಷಿಸಿದರು.
ಗಫಿನ್ ಗಾಯಗೊಂಡು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ 32ರ ಪ್ರಾಯದ ಝೆಬಲ್ಲಾಸ್ ಫ್ರೆಂಚ್ ಓಪನ್‌ನಲ್ಲಿ ಮೊದಲ ಬಾರಿ ನಾಲ್ಕನೆ ಸುತ್ತಿಗೇರಿದ್ದಾರೆ. ಮುಂದಿನ ಸುತ್ತಿನಲ್ಲಿ ಆಸ್ಟ್ರೀಯದ ಡೊಮಿನಿಕ್ ಥೀಮ್ ಅಥವಾ ಅಮೆರಿಕದ ಸ್ಟೀವನ್ ಜಾನ್ಸನ್‌ರನ್ನು ಎದುರಿಸಲಿದ್ದಾರೆ.





