ಫ್ರೆಂಚ್ ಓಪನ್ ಟೆನಿಸ್ ಟೂರ್ನಿ: ರಾವೊನಿಕ್ ಅಂತಿಮ-16 ಸುತ್ತಿಗೆ ಲಗ್ಗೆ

ಪ್ಯಾರಿಸ್, ಜೂ.2: ಕೆನಡಾದ ಮಿಲಾಸ್ ರಾವೊನಿಕ್ ಫ್ರೆಂಚ್ ಓಪನ್ ಟೆನಿಸ್ ಟೂರ್ನಿಯಲ್ಲಿ ಸತತ ಎರಡನೆ ವರ್ಷ ಅಂತಿಮ-16ರ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
ಶುಕ್ರವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ರಾವೊನಿಕ್ ಎದುರಾಳಿ ಸ್ಪೇನ್‌ನ ಗುಲೆರ್ಮೊ ಗಾರ್ಸಿಯ-ಲೊಪೆಝ್ ಗಾಯಾಳು ನಿವೃತ್ತಿಯಾದರು. ಈ ಹಿನ್ನೆಲೆಯಲ್ಲಿ ರಾವೊನಿಕ್ ಮುಂದಿನ ಸುತ್ತಿಗೆ ಪ್ರವೇಶಿಸಿದರು. ರಾವೊನಿಕ್ ಕೇವಲ 21 ನಿಮಿಷಗಳಲ್ಲಿ ಮೊದಲ ಸೆಟ್‌ನ್ನು 6-1 ಅಂತರದಿಂದ ಗೆದ್ದುಕೊಂಡಿದ್ದರು. ಸ್ಪೇನ್ ಆಟಗಾರ ಲೊಪೆಝ್ ಗಾಯಗೊಂಡು ಸ್ಪರ್ಧೆಯಿಂದ ಹಿಂದೆ ಸರಿದಾಗ ರಾವೊನಿಕ್ 1-0 ಮುನ್ನಡೆಯಲ್ಲಿದ್ದರು.
26ರ ಹರೆಯದ ರಾವೊನಿಕ್ ಮುಂದಿನ ಸುತ್ತಿನಲ್ಲಿ ಸ್ಪೇನ್‌ನ ಪಾಬ್ಲೊ ಕರೆನೊ ಬುಸ್ಟಾರನ್ನು ಎದುರಿಸಲಿದ್ದಾರೆ.
ರಾವೊನಿಕ್ ಕೂಡ ಗಾಯದ ಸಮಸ್ಯೆಯಿಂದಾಗಿ ಡೆಲ್‌ರೆ ಬೀಚ್ ಫೈನಲ್‌ನಿಂದ ಹಿಂದೆ ಸರಿದಿದ್ದಲ್ಲದೆ, ಅಕಾಪಲ್ಕೊ ಹಾಗೂ ಇಂಡಿಯನ್ ವೆಲ್ಸ್ ಟೂರ್ನಿಯಿಂದಲೂ ಹೊರಗುಳಿದಿದ್ದರು.
ನಾಲ್ಕನೆ ಸುತ್ತಿಗೆ ನಡಾಲ್: ಕ್ಲೇ ಕೋರ್ಟ್ ಕಿಂಗ್ ಖ್ಯಾತಿಯ ರಫೆಲ್ ನಡಾಲ್ ಕೇವಲ 90 ನಿಮಿಷಗಳಲ್ಲಿ ಫ್ರೆಂಚ್ ಓಪನ್ ಟೂರ್ನಿಯಲ್ಲಿ ನಾಲ್ಕನೆ ಸುತ್ತಿಗೆ ತಲುಪಿದರು.
ಶುಕ್ರವಾರ ನಡೆದ ಪಂದ್ಯದಲ್ಲಿ ನಡಾಲ್ ಅವರು ಜಾರ್ಜಿಯದ ನಿಕೊಲೊಝ್ ಬಾಸಿಲಶಿವಿಲ್ ವಿರುದ್ಧ 6-0, 6-1, 6-0 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ.







