ಟೀಮ್ ಇಂಡಿಯಾವನ್ನು ಭೇಟಿಯಾದ ಗಂಗುಲಿ

ಲಂಡನ್, ಜೂ.2: ಭಾರತ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಅನಿಲ್ ಕುಂಬ್ಳೆ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ ಎಂಬ ದಟ್ಟ ವದಂತಿಯ ನಡುವೆ ಮಾಜಿ ನಾಯಕ ಸೌರವ್ ಗಂಗುಲಿ ಅವರು ತಂಡದ ವಾಸ್ತವ್ಯವಿರುವ ಹೊಟೇಲ್‌ನಲ್ಲಿ ತಂಡದ ಎಲ್ಲ ಸದಸ್ಯರನ್ನು ಭೇಟಿಯಾಗಿ ಮಾತನಾಡಿದ್ದಾರೆ. ಕುಂಬ್ಳೆ ಅವರಿಂದ ಎಲ್ಲ ಮಾಹಿತಿಯನ್ನು ಪಡೆದಿದ್ದಾರೆಂದು ಮೂಲಗಳು ತಿಳಿಸಿವೆ.
ಗಂಗುಲಿ ಅವರು ಸಚಿನ್ ತೆಂಡುಲ್ಕರ್ ಹಾಗೂ ವಿವಿಎಸ್ ಲಕ್ಷ್ಮಣ್ ಅವರನ್ನೊಳಗೊಂಡ ತ್ರಿ-ಸದಸ್ಯ ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯರಾಗಿದ್ದಾರೆ. ಕೊಹ್ಲಿ-ಕುಂಬ್ಳೆ ಸಂಬಂಧದಲ್ಲಿ ಬಿರುಕುಬಿಟ್ಟಿದೆ ಎಂಬ ವರದಿಯು ಚಾಂಪಿಯನ್ಸ್ ಟ್ರೋಫಿಗೆ ಮೊದಲು ಭಾರತ ಕ್ರಿಕೆಟ್ ತಂಡದಲ್ಲಿ ನಡುಕ ಹುಟ್ಟಿಸಿದೆ.
ಬಿಸಿಸಿಐ ಪ್ರಭಾರ ಕಾರ್ಯದರ್ಶಿ ಅಮಿತಾಭ್ ಚೌಧರಿ ಹಾಗೂ ಬಿಸಿಸಿಐ ಜನರಲ್ ಮ್ಯಾನೇಜರ್ ಎಂವಿ ಶ್ರೀಧರ್ ಭಾರತೀಯ ಕ್ರಿಕೆಟ್ ಸದಸ್ಯರನ್ನು ಗುರುವಾರ ಭೇಟಿಯಾಗಿದ್ದಾರೆ.
ಕೋಚ್ ಆಗಿ ಕುಂಬ್ಳೆ ಅವರ ಅಧಿಕಾರದ ಅವಧಿ ಚಾಂಪಿಯನ್ಸ್ ಟ್ರೋಫಿಯೊಂದಿಗೆ ಕೊನೆಗೊಳ್ಳಲಿದೆ. ಕುಂಬ್ಳೆ ಕೋಚ್ ಆಗಿ ಮುಂದುವರಿಯುವ ಸಾಧ್ಯತೆಯಿಲ್ಲ ಎನ್ನಲಾಗಿದೆ. ತೆಂಡುಲ್ಕರ್, ಗಂಗುಲಿ ಹಾಗೂ ಲಕ್ಷ್ಮಣ್ ಅವರನ್ನೊಳಗೊಂಡ ತ್ರಿಸದಸ್ಯರ ಕ್ರಿಕೆಟ್ ಸಲಹಾ ಸಮಿತಿಯು ಕುಂಬ್ಳೆ ಅವರನ್ನು ಕೋಚ್ ಆಗಿ ಮುಂದುವರಿಸಬೇಕೇ ಎಂದು ನಿರ್ಧರಿಸಲಿದೆ







