ನಗರಸಭೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಅಧಿಕಾರಿಗಳಿಗೆ ಸೂಚನೆ
.jpg)
ಸಾಗರ ಜೂ.3 ನಗರಸಭೆಗೆ ತೀರ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ತಕ್ಷಣ ಜಮೀನಿನ ಸರ್ವೇ ಕಾರ್ಯವನ್ನು ಕೈಗೊಂಡು, ಯಾವ ಸರ್ವೇ ನಂ.ನಲ್ಲಿ ಎಷ್ಟು ಅಡಿ ಜಾಗ ಯೋಜನೆಗೆ ಬಿಟ್ಟು ಕೊಡಬೇಕು. ಜಮೀನಿನ ಮೂಲ ರೈತರು ಯಾರು ಎನ್ನುವ ಕುರಿತು ಪಟ್ಟಿ ತಯಾರಿಸಲಾಗುತ್ತದೆ ಎಂದು ತಿಳಿಸಿದರು.
ಜಮೀನು ಬಿಟ್ಟುಕೊಡುವ ರೈತರಿಗೆ ಯಾವ ರೀತಿಯಲ್ಲಿ ಪರಿಹಾರ ನೀಡಬೇಕು ಎನ್ನುವ ಕುರಿತು ಮುಂದಿನ ಶನಿವಾರ ಸಚಿವರಾದ ಕಾಗೋಡು ತಿಮ್ಮಪ್ಪ ಅವರ ಸಮ್ಮುಖದಲ್ಲಿ ಮತ್ತೊಂದು ಸುತ್ತಿನ ಸಭೆ ನಡೆಸಲಾಗುತ್ತದೆ. ಹಾಲಿ ಯೋಜನೆ ಯಶಸ್ಸಿಗೆ ಅಗತ್ಯವಾದ ಜಮೀನು ಬಿಟ್ಟುಕೊಡಲು ಕೆಲವೊಂದು ಷರತ್ತುಗಳನ್ನು ಹಾಕಿ ರೈತರು ಒಪ್ಪಿಕೊಂಡಿರುತ್ತಾರೆ.ಒಳಚರಂಡಿ ಪೈಪ್‌ಲೈನ್ ಹಾದು ಹೋಗುವ ಜಮೀನಿನಲ್ಲಿ ಇರುವ ರೈತರಿಗೆ ಸೂಕ್ತ ಪರಿಹಾರ ಹಾಗೂ ರಸ್ತೆ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪ ಭರವಸೆ ನೀಡಿದ್ದಾರೆ.
ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ನಗರವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ಒಳಚರಂಡಿ ಕಾಮಗಾರಿಯ ಟ್ರೀಟ್‌ಮೆಂಟ್ ಪ್ಲಾಂಟ್‌ಗೆ ಸಂಪರ್ಕಿಸುವ ಪೈಪ್‌ಲೈನ್ ಹಾದುಹೋಗುವ ಸಿರವಾಳ ಗ್ರಾಮದ ರೈತರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಉದ್ದೇಶಿತ ಪೈಪ್‌ಲೈನ್ ಅಳವಡಿಕೆಗಾಗಿ 1.9 ಎಕರೆ ಜಮೀನು ಅಗತ್ಯವಾಗಿದೆ. ಸುಮಾರು 29 ರೈತರ ಜಮೀನು ಪೈಪ್‌ಲೈನ್ ಹಾದುಹೋಗುವ ಮಾರ್ಗದಲ್ಲಿ ಬರುವುದರಿಂದ ಎಲ್ಲರಿಗೂ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದ ಜೊತೆಗೆ ಸೂಕ್ತ ಪರಿಹಾರವನ್ನು ನೀಡಲಾಗುತ್ತದೆ. ಅಭಿವೃದ್ದಿ ದೃಷ್ಟಿಯಿಂದ ಸಿರವಾಳ ಗ್ರಾಮದ ಜನರು ಯೋಜನೆ ಅನುಷ್ಟಾನಕ್ಕೆ ಭೂಮಿ ಬಿಟ್ಟುಕೊಡಬೇಕು ಎಂದರು.
ಸಮೀಪವಿರುವ ಸಿರವಾಳ ಗ್ರಾಮದ ಜಮೀನಿನಲ್ಲಿ ಪೈಪ್‌ಲೈನ್ ಅಳವಡಿಕೆ ಸುಲಭ ಮಾರ್ಗವಾಗಿದೆ. ಅಧಿಕಾರವಿದೆ ಎಂದು ಏಕಾಏಕಿ ರೈತರ ಜಮೀನು ವಶಕ್ಕೆ ಪಡೆಯುವ ಉದ್ದೇಶ ಆಡಳಿತಕ್ಕೆ ಇಲ್ಲ. ಯೋಜನೆ ವ್ಯಾಪ್ತಿಯಲ್ಲಿ ಬರುವ ಎಲ್ಲ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರ ಅಹವಾಲುಗಳನ್ನು ಕೇಳಿ ಅದಕ್ಕೆ ಜಿಲ್ಲಾಡಳಿತ ಸ್ಪಂದಿಸಲಿದೆ ಎಂದರು. ಪೈಪ್‌ಲೈನ್ ಅಳವಡಿಕೆ ಸಂದರ್ಭದಲ್ಲಿ ರೈತರಿಗೆ ಯಾವುದೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುವುದು. ಕೆಲವು ಜಮೀನಿನ ಮೇಲ್ಭಾಗದಲ್ಲಿ 110 ಕೆ.ವಿ. ವಿದ್ಯುತ್ ಮಾರ್ಗ ಹರಿದು ಹೋಗಿದೆ. ಗುಂಡಿ ತೆಗೆಯುವಾಗ ವಿದ್ಯುತ್ ಮಾರ್ಗ ಹರಿದು ಹೋಗಿರುವ ಜಾಗಕ್ಕೆ ತೋಷದ ಸಂಗತಿ ಎಂದರು.
ಸಿರವಾಳ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ತುಕಾರಾಮ ಬಿ. ಸಿರವಾಳ ಮಾತನಾಡಿ, ಈ ಜಮೀನಿನಲ್ಲಿ ಬರುವವರು ಸಣ್ಣ ರೈತರಾಗಿದ್ದು, ಅವರಿಗೆ ನಗರಸಭೆ ವ್ಯಾಪ್ತಿಯಲ್ಲಿ ಜಮೀನಿಗೆ ಇರುವ ಮೌಲ್ಯವನ್ನು ನೀಡುವ ಜೊತೆಗೆ ಯೋಜನೆಗಾಗಿ ಜಮೀನು ಬಿಟ್ಟುಕೊಡುವ ರೈತರಿಗೆ ಸೂಕ್ತ ಪರಿಹಾರವನ್ನು ನೀಡಬೇಕು. ಪೈಪ್‌ಲೈನ್ ಅಳವಡಿಕೆ ಸಂದರ್ಭದಲ್ಲಿ ಸ್ಥಳೀಯ ರೈತರಿಗೆ ಯಾವುದೆ ರೀತಿಯ ತೊಂದರೆಯಾಗದಂತೆ ಅಧಿಕಾರಿಗಳು ನಿಗಾವಹಿಸಬೇಕು ಎಂದರು. ನಾನು ಭೀಮನೇರಿ ಗ್ರಾಮ ಪಂಚಾಯ್ತಿ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ನಗರಸಭೆಯವರಿಗೆ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸಂಗಳದಲ್ಲಿ 17 ಎಕರೆ ಜಮೀನು ಕೊಡಲಾಗಿತ್ತು. ಆದರೆ ನಗರಸಭೆಯವರು ಜಮೀನು ಪಡೆಯುವ ಸಂದರ್ಭದಲ್ಲಿ ಕೊಟ್ಟ ಭರವಸೆ ಈಡೇರಿಸಿಲ್ಲ. ಘನತ್ಯಾಜ್ಯ ವಿಲೇವಾರಿ ಘಟಕದ ಸುತ್ತಮುತ್ತ ಸೂಕ್ತ ನಿರ್ವಹಣೆ ಇಲ್ಲದೆ ಗ್ರಾಮಸ್ಥರು ವಾಸನೆ, ನೊಣದ ಹಾವಳಿಯಿಂದ ಬದುಕಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ.
ಈ ಯೋಜನೆಯನ್ನು ವೈಜ್ಞಾನಿಕ ತಳಹದಿಯ ಮೇಲೆ ಕೈಗೊಳ್ಳುವ ಜೊತೆಗೆ ರೈತರ ಬೇಡಿಕೆ ಈಡೇರಿಸಿದರೆ ಜಮೀನು ಬಿಟ್ಟುಕೊಡಲು ಚಿಂತನೆ ನಡೆಸಲಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ನಾಗರಾಜ್ ಆರ್. ಸಿಂಗ್ರೇರ್, ತಹಶೀಲ್ದಾರ್ ತುಷಾರ್ ಬಿ. ಹೊಸೂರು, ಪೌರಾಯುಕ್ತ ಎಸ್.ರಾಜು, ಒಳಚರಂಡಿ ಮಂಡಳಿಯ ಕಾರ್ಯಪಾಲಕ ಅಭಿಯಂತರ ರಂಗನಾಥ್, ನಗರಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಎಚ್.ಕೆ.ನಾಗಪ್ಪ, ಜಿಲ್ಲಾಧಿಕಾರಿಗಳ ಕಚೇರಿಯ ಯೋಜನಾ ನಿರ್ದೇಶಕ ಪ್ರಮೋದ್ ಇನ್ನಿತರರು ಹಾಜರಿದ್ದರು.







