ಪ್ರತ್ಯೇಕತಾವಾದಿ ಶಬ್ಬೀರ್ ಶಾಗೆ ಇಡಿಯಿಂದ ಸಮನ್ಸ್ ಜಾರಿ
.png)
ಹೊಸದಿಲ್ಲಿ,ಜೂ.3: ದಶಕಕ್ಕೂ ಹಳೆಯ ಹಣ ಚಲುವೆ ಪ್ರಕರಣವೊಂದಕ್ಕೆ ಸಂಬಂಧಿಸಿ ದಂತೆ ಜಮ್ಮು-ಕಾಶ್ಮೀರದ ಪ್ರತ್ಯೇಕತಾವಾದಿ ಶಬ್ಬೀರ್ ಶಾಗೆ ಜಾರಿ ನಿರ್ದೇಶನಾಲಯ (ಇಡಿ)ವು ಹೊಸದಾಗಿ ಸಮನ್ಸ್ ಹೊರಡಿಸಿದೆ. ಭಯೋತ್ಪಾದನೆಗೆ ಹಣಕಾಸು ನೆರವು ನೀಡಿದ್ದ ಆರೋಪ ಶಬ್ಬೀರ್ ತಲೆಯ ಮೇಲಿದೆ.
ಜೂನ್ 6ರಂದು ದಿಲ್ಲಿಯಲ್ಲಿ ಪ್ರಕರಣದ ತನಿಖಾಧಿಕಾರಿಯ ಮುಂದೆ ಹಾಜರಾಗಿ ತನ್ನ ಹೇಳಿಕೆಯನ್ನು ದಾಖಲಿಸುವಂತೆ ಇಡಿ ಶಬ್ಬೀರ್‌ಗೆ ಸೂಚಿಸಿದೆ ಎಂದು ಅಧಿಕಾರಿಗಳು ತಿಳಿಸಿದರು. ಇಡಿ ಮೇ 25ರಂದು ಶಬ್ಬೀರ್‌ಗೆ ಮೊದಲ ಬಾರಿ ಸಮನ್ಸ್ ಹೊರಡಿಸಿತ್ತು. ಅದಕ್ಕೆ ಸ್ಪಂದಿಸಲು ಶಬ್ಬೀರ್ ವಿಫಲಗೊಂಡಿದ್ದ ಹಿನ್ನೆಲೆಯಲ್ಲಿ ಈಗ ಹೊಸದಾಗಿ ಸಮನ್ಸ್ ಹೊರಡಿಸಲಾಗಿದೆ.
ದಿಲ್ಲಿ ಪೊಲೀಸರು 2005,ಆಗಸ್ಟ್‌ನಲ್ಲಿ ಹವಾಲಾ ಏಜೆಂಟ್ ಮುಹಮ್ಮದ್ ಅಸ್ಲಾಂ ವಾನಿ ಎಂಬಾತನನ್ನು ಬಂಧಿಸಿದ್ದು, ತಾನು 2.25ಕೋ.ರೂ.ಗಳನ್ನು ಶಬ್ಬೀರ್ ಶಾಗೆ ತಲುಪಿಸಿದ್ದಾಗಿ ಆತ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದ. ಹಣ ಚಲುವೆ ತಡೆ ಕಾಯ್ದೆಯಡಿ ಶಾ ಮತ್ತು ವಾನಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ ಕಳೆದ ಕೆಲವು ವರ್ಷಗಳಲ್ಲಿ ಹಲವಾರು ಬಾರಿ ಸಮನ್ಸ್ ಹೊರಡಿಸಿದ್ದರೂ ಶಬ್ಬೀರ್ ಹಾಜರಾಗಿರಲಿಲ್ಲ.
ತನ್ನ ವಿರುದ್ದದ ಇಡಿ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ ಎಂದು ಶಬ್ಬೀರ್ ಈ ಹಿಂದೆ ಸುದ್ದಿಸಂಸ್ಥೆಗೆ ಹೇಳಿದ್ದರು.







