ನನಗೆ ವಿಶೇಷ ಸೌಕರ್ಯ ಬೇಡ: ಅಧಿಕಾರಿಗಳಿಗೆ ಆದಿತ್ಯನಾಥ್ ಸೂಚನೆ

ಲಕ್ನೊ,ಜೂ. 3: ತಾನು ಭೇಟಿ ನೀಡುವಲ್ಲೆಲ್ಲ ಅಧಿಕಾರಿಗಳು ವಿಶೇಷ ವ್ಯವಸ್ಥೆ ಮಾಡುವುದನ್ನು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಿರಾಕರಿಸಿದ್ದಾರೆ. ಮುಖ್ಯಮಂತ್ರಿ ಅಥವಾ ಅಧಿಕಾರಿಗಳ ಭೇಟಿಗಾಗಿ ವಿಶೇಷ ವ್ಯವಸ್ಥೆ ಏರ್ಪಡಿಸಬಾರದು ಎಂದು ಯೋಗಿಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ತನಗೆ ನೆಲದಲ್ಲಿ ಕುಳಿತು ಅಭ್ಯಾಸ ಇದೆ. ಆದ್ದರಿಂದ ತನಗೆ ವಿಶೇಷ ವ್ಯವಸ್ಥೆಗಳು ಬೇಡ. ರಾಜ್ಯದ ಜನರಿಗೆ ನೀಡುವ ಅದೇ ಗೌರವವನ್ನು ಮುಖ್ಯಮಂತ್ರಿಎನ್ನುವ ನೆಲೆಯಲ್ಲಿ ತನಗೆ ನೀಡಿದರೆ ಸಾಕು ಎಂದು ಆದಿತ್ಯನಾಥ್ ಆದೇಶದಲ್ಲಿ ಸ್ಪಷ್ಪಪಡಿಸಿದ್ದಾರೆ.
ಪಾಕಿಸ್ತಾನದ ಗುಂಡುಹಾರಾಟದಲ್ಲಿ ಹತರಾದ ಬಿಎಸ್‌ಎಫ್ ಯೋಧ ಪ್ರೇಂ ಸಾಗರ್ ಮನೆಗೆ ಮುಖ್ಯಮಂತ್ರಿ ಭೇಟಿ ನೀಡುವ ಸಂದರ್ಭದಲ್ಲಿ ಅಧಿಕಾರಿಗಳು ಎ.ಸಿ. ಮುಂತಾದ ವ್ಯವಸ್ಥೆ ಮಾಡಿ, ಭೇಟಿಯ ನಂತರ ಅದನ್ನು ಮರಳಿ ಕೊಂಡೊಯ್ದದ್ದು ವಿವಾದವಾಗಿತ್ತು.
ಕುಶಿನಗರದಲ್ಲಿ ಯೋಗಿ ಭಾಗವಹಿಸಿದ್ದ ವಾಕ್ಸಿನ್ ಜಾಗೃತಿ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಂಚಿತವಾಗಿ ಅಧಿಕಾರಿಗಳು ದಲಿತ ಕುಟುಂಬಗಳಿಗೆ ಸೋಪು, ಶಾಂಪೂ ವಿತರಿಸಿ ಸ್ನಾನಮಾಡಿ ಶುಚಿಯಾಗಿರಲು ಹೇಳಿದ್ದು ಕೂಡಾ ವಿವಾದವಾಗಿತ್ತು. ಕುಶಿನಗರಕ್ಕೆ ಮುಖ್ಯಮಂತ್ರಿ ಭೇಟಿ ನೀಡು ವ ಹಿನ್ನೆಲೆಯಲ್ಲಿ ಶೌಚಾಲಯ, ರಸ್ತೆಗಳನ್ನು ಸ್ವಚ್ಚಗೊಳಿಸಲಾಗಿತ್ತು.







