ಮಡಿಕೇರಿ: ವೇದಾಂತ ಸಂಘಕ್ಕೆ ಶತಮಾನೋತ್ಸವದ ಸಂಭ್ರಮ

ಮಡಿಕೇರಿ ಜೂ.3 :ಸ್ವಾಮಿ ವಿವೇಕಾನಂದರ ಸ್ಫೂರ್ತಿಯಿಂದಾಗಿ 1916 ರಲ್ಲಿ ನಗರದಲ್ಲಿ ಸ್ಥಾಪನೆಗೊಂಡ ವೇದಾಂತ ಸಂಘ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ನವೀಕೃತಗೊಂಡ ಸಂಘದ ಸಭಾಂಗಣದಲ್ಲಿ ಶ್ರೀ ರಾಮಕೃಷ್ಣ-ಶಾರದಾಮಾತೆ ಹಾಗೂ ಸ್ವಾಮಿ ವಿವೇಕಾನಂದರ ಭಾವಚಿತ್ರಗಳ ಅನಾವರಣ ಕಾರ್ಯಕ್ರಮ ಜೂ.8 ರಂದು ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊನ್ನಂಪೇಟೆ ಶ್ರೀರಾಮಕೃಷ್ಣ ಶಾರದಾಶ್ರಮದ ಸ್ವಾಮಿ, ಶ್ರೀಬೋಧಸ್ವರೂಪಾನಂದ ಮಹಾರಾಜ್ ವೇದಾಂತ ಸಂಘದಲ್ಲಿ ಜೂ.8 ರಂದು ನಡೆಯುವ ಕಾರ್ಯಕ್ರಮಗಳ ಕುರಿತು ಮಾತನಾಡಿದರು.
ಬೆಳಗ್ಗೆ 11 ಗಂಟೆಗೆ ರಾಮಕೃಷ್ಣ ಮಿಷನ್ನಿನ ಉಪಾಧ್ಯಕ್ಷರಾದ ಸ್ವಾಮಿ ಗೌತಮಾನಂದಜೀ ಮಹಾರಾಜ್ ಅವರು ಮೂವರು ಮಹನೀಯರ ಭಾವಚಿತ್ರಗಳನ್ನು ಅನಾವರಣಗೊಳಿಸಲಿದ್ದಾರೆ. ನಂತರ ಸಭಾ ಕಾರ್ಯಕ್ರಮ ನಡೆಯಲಿದ್ದು, ಸ್ವಾಮೀಜಿಗಳು ವಿವೇಕಾನಂದರ ಸಂದೇಶಗಳ ಬಗ್ಗೆ ಜಾಗೃತಿ ಮೂಡಿಸಲಿದ್ದಾರೆ ಎಂದರು.
ಕಾರ್ಯಕ್ರಮದ ಬಳಿಕ ಪೊನ್ನಂಪೇಟೆಗೆ ತೆರಳಲಿರುವ ಶ್ರೀ ಗೌತಮಾನಂದಜೀ ಮಹಾರಾಜ್ ಅವರನ್ನು ಅಲ್ಲಿನ ಭಕ್ತ ವೃಂದ ಅದ್ಧೂರಿಯಾಗಿ ಸ್ವಾಗತಿಸಲಿದೆ. ನಗರದ ಬಸವೇಶ್ವರ ದೇವಸ್ಥಾನದಿಂದ ಶ್ರೀ ರಾಮಕೃಷ್ಣ ಶಾರದಾಶ್ರಮದವರೆಗೆ ಸ್ವಾಮೀಜಿಗಳ ಮೆರವಣಿಗೆ ನಡೆಯಲಿದೆ. ಸಂಜೆ 5.30ಕ್ಕೆ ಭಕ್ತರನ್ನುದ್ದೇಶಿಸಿ ಸ್ವಾಮೀಜಿಗಳು ಮಾತನಾಡಲಿದ್ದಾರೆ. ಸಂಜೆ 6.30 ಕ್ಕೆ ಆಶ್ರಮದಲ್ಲಿ ವಿಶೇಷ ಪೂಜೆ ನಡೆಯಲಿದೆ ಎಂದು ಶ್ರೀಬೋಧಸ್ವರೂಪಾನಂದ ಮಹಾರಾಜ್ ತಿಳಿಸಿದರು.
ಜೂ.9 ರಂದು ಶ್ರೀ ಗೌತಮಾನಂದಜೀ ಮಹಾರಾಜ್ ಬೆಳಗ್ಗೆ 7 ಗಂಟೆಗೆ ಆಸಕ್ತ ಭಕ್ತರಿಗೆ ಮಂತ್ರ ದೀಕ್ಷೆಯನ್ನು ನೀಡಲಿದ್ದಾರೆ. ಇದಕ್ಕಾಗಿ ಶ್ರೀ ರಾಮಕೃಷ್ಣ ಶಾರದಾಶ್ರಮವನ್ನು ಆಸಕ್ತರು ಮೊ.9036106418 ಮೂಲಕ ಸಂಪರ್ಕಿಸಬಹುದೆಂದು ತಿಳಿಸಿದರು. ಸಂಜೆ 4.45 ಕ್ಕೆ ಶಾಂಭವಾನಂದ ಸಭಾಂಗಣದಲ್ಲಿ ಶ್ರೀ ರಾಮಕೃಷ್ಣ, ಶಾರದಾಮಾತೆ ಮತ್ತು ಸ್ವಾಮಿ ವಿವೇಕಾನಂದರ ವಿಚಾರಧಾರೆಗಳ ಪ್ರದರ್ಶನವನ್ನು ಆಯೋಜಿಸಲಾಗಿದೆ ಎಂದರು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ದೇಶದಲ್ಲಿ ವೈದ್ಯಕೀಯ ಮತ್ತು ವೈಜ್ಞಾನಿಕ ಕ್ರಾಂತಿಯಾಗಿದೆ. ಆದರೆ, ಇದರ ಜೊತೆಯಲ್ಲಿ ಆಧ್ಯಾತ್ಮಿಕ ಬೆಳವಣಿಗೆ ಅತೀ ಮುಖ್ಯವೆಂದು ಶ್ರೀ ಬೋಧಸ್ವರೂಪಾನಂದ ಮಹಾರಾಜ್ ಅಭಿಪ್ರಾಯಪಟ್ಟರು. ಇದೇ ಕಾರಣಕ್ಕಾಗಿ ರಾಮಕೃಷ್ಣ ಆಶ್ರಮ ಆಧ್ಯಾತ್ಮದ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುತ್ತಿದೆ ಎಂದರು.
ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಗೆ ನೂರು ವರ್ಷಗಳ ಹಿಂದೆಯೇ ವೇದಾಂತ ಸಂಘ ಉಡುಗೊರೆಯಾಗಿ ದೊರೆತ್ತಿದ್ದು, ಇದನ್ನು ಸರ್ವರೂ ಸದುಪಯೋಗ ಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.ವೇದಾಂತ ಸಂಘದ ಅಧ್ಯಕ್ಷರಾದ ಕೆ.ಎಸ್.ದೇವಯ್ಯ ಮಾತನಾಡಿ, ಮುಂದಿನ ದಿನಗಳಲ್ಲಿ ವೇದಾಂತ ಸಂಘದಲ್ಲಿ ನಿರಂತರ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಕಸ್ತೂರಿ ಗೋವಿಂದಮ್ಮಯ್ಯ ಹಾಗೂ ಗೋಪಾಲಕೃಷ್ಣ ಉಪಸ್ಥಿತರಿದ್ದರು.







