ಹಜ್ ಯಾತ್ರಿಕರಿಗೆ ಸಕಲ ಸೌಲಭ್ಯ: ಸೌದಿ ಯುವರಾಜ ಘೋಷಣೆ

ಮಕ್ಕಾ (ಸೌದಿ ಅರೇಬಿಯ), ಜೂ. 3: ಹಜ್ ಮತ್ತು ಉಮ್ರಾವನ್ನು ನೆಮ್ಮದಿ, ಶಾಂತಿ ಮತ್ತು ಭದ್ರತೆಯಿಂದ ನಿರ್ವಹಿಸಲು ಸಾಧ್ಯವಾಗುವಂತೆ ಎಲ್ಲ ಅಗತ್ಯ ಸೌಲಭ್ಯಗಳನ್ನು ಜನರಿಗೆ ಒದಗಿಸಲಾಗುವುದು ಎಂದು ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ನಯೀಫ್ ಹೇಳಿದ್ದಾರೆ.
ಇತ್ತೀಚೆಗೆ ಈ ವರ್ಷದ ಉಮ್ರಾ ಋತುವಿಗಾಗಿ ರೂಪಿಸಲಾದ ಭದ್ರತಾ ಯೋಜನೆಗಳ ಜಾರಿಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡುತ್ತಿದ್ದರು.
ಅದೇ ವೇಳೆ, ಈ ರಮಝಾನ್ ವೇಳೆ ಪವಿತ್ರ ಮಕ್ಕಾ ಮತ್ತು ಮದೀನಾ ನಗರಗಳಲ್ಲಿ ಸಾಂಕ್ರಾಮಿಕ ರೋಗ ರಹಿತ ಉಮ್ರಾ ಏರ್ಪಡಿಸುವ ಭರವಸೆಯನ್ನು ಆರೋಗ್ಯ ಸಚಿವಾಲಯ ನೀಡಿದೆ.
ಈವರೆಗೆ, ಯಾತ್ರಾರ್ಥಿಗಳಲ್ಲಿ ಯಾವುದೇ ಸಾಂಕ್ರಾಮಿಕ ರೋಗ ಕಂಡುಬಂದಿಲ್ಲ ಎಂದು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದರು.
ಆರೋಗ್ಯ ಸಚಿವಾಲಯದ ಸಮಗ್ರ ಯೋಜನೆಯೊಂದನ್ನು ಮಕ್ಕಾದಲ್ಲಿ ಜಾರಿಗೊಳಿಸಲಾಗುತ್ತಿದೆ. ಇದರ ಪ್ರಕಾರ, ನುರಿತ ಸಿಬ್ಬಂದಿ ನಡೆಸುವ ಪ್ರಾಥಮಿಕ ಆರೋಗ್ಯ ರಕ್ಷಣೆ ಕೇಂದ್ರಗಳು ಮತ್ತು ಇತರ ಆರೋಗ್ಯ ಕೇಂದ್ರಗಳ ಜಾಲದ ಮೂಲಕ ಶ್ರೇಷ್ಠ ಆರೋಗ್ಯ ಸೇವೆಗಳನ್ನು ಯಾತ್ರಿಕರಿಗೆ ನೀಡಲಾಗುತ್ತದೆ.
ಈ ಕೇಂದ್ರಗಳಿಗೆ ಹೆಚ್ಚುವರಿಯಾಗಿ, ಯಾತ್ರಿಕರಿಗೆ ಸೇವೆ ನೀಡಲು ಏಳು ಆಸ್ಪತ್ರೆಗಳು ಮತ್ತು ಕಿಂಗ್ ಅಬ್ದುಲ್ಲಾ ಮೆಡಿಕಲ್ ಸಿಟಿಯನ್ನು ಸಜ್ಜುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಿಂಗ್ ಅಬ್ದುಲಝೀಝ್ ಆಸ್ಪತ್ರೆ, ಅಜ್ಯಾದ್ ತುರ್ತು ಆಸ್ಪರ್ತೆ, ಹೀರಾ ಜನರಲ್ ಆಸ್ಪತ್ರೆ ಮತ್ತು ಅಲ್-ನೂರ್ ಸ್ಪೆಶಲಿಸ್ಟ್ ಚಿಲ್ಡ್ರನ್ ಆ್ಯಂಡ ಮ್ಯಾಟರ್ನಿಟಿ ಆಸ್ಪತ್ರೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತವೆ.







