ಕಾಶ್ಮೀರದ ಯುವಜನತೆ ದೇಶದ ಭವಿಷ್ಯ: ರಾಜನಾಥ್ ಸಿಂಗ್
ಸರ್ಜಿಕಲ್ ದಾಳಿ ಬಳಿಕ ಒಳನುಸುಳುವ ಪ್ರಮಾಣ 45% ಇಳಿಕೆ

ಹೊಸದಿಲ್ಲಿ, ಜೂ.3: ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಭಾರತೀಯ ಸೇನೆ ನಡೆಸಿದ ಸರ್ಜಿಕಲ್ ದಾಳಿ ಬಳಿಕ ಗಡಿಯಿಂದ ದೇಶದೊಳಗೆ ನುಸುಳುವ ಪ್ರಮಾಣದಲ್ಲಿ ಶೇ.45ರಷ್ಟು ಇಳಿಕೆಯಾಗಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಕೇಂದ್ರದಲ್ಲಿ ಎನ್‌ಡಿಎ ಸರಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಕಾನೂನು ಮತ್ತು ವ್ಯವಸ್ಥೆಯನ್ನು ದೃಢಗೊಳಿಸಲಾಗಿದ್ದು ಕಳೆದ ಮೂರು ವರ್ಷಗಳಲ್ಲಿ 368 ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಎಂದು ತಿಳಿಸಿದರು. ಕಾಶ್ಮೀರದ ಯುವಜನತೆ ನಮ್ಮವರೇ. ಇವರು ಭಾರತದ ಯುವಜನತೆ. ದೇಶದ ಭವಿಷ್ಯ ಎಂದು ರಾಜನಾಥ್ ಸಿಂಗ್ ಹೇಳಿದರು.
ಜಮ್ಮು-ಕಾಶ್ಮೀರದಲ್ಲಿ ಪಾಕ್ ಪ್ರೇರಿತ ಭಯೋತ್ಪಾದನೆಯನ್ನು ಅಂತ್ಯಗೊಳಿಸಿ ಅಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಸ್ಥಾಪಿಸಲಿದ್ದೇವೆ ಎಂದು ನಾನು ಭರವಸೆ ನೀಡುತ್ತೇನೆ. ಕಾಶ್ಮೀರ ಸಮಸ್ಯೆಗೆ ಒಂದು ಸಮಗ್ರ ಪರಿಹಾರದ ಅಗತ್ಯವಿದೆ. ಸೇನಾಪಡೆ ಅಥವಾ ರಾಜಕೀಯ.. ಈ ರೀತಿ ಬಿಡಿಬಿಡಿಯಾಗಿ ನಡೆಸುವ ಪ್ರಯತ್ನದಿಂದ ಶಾಶ್ವತ ಪರಿಹಾರ ಸಾಧ್ಯವಾಗದು ಎಂದರು.
ಮಾವೋವಾದಿ ನಕ್ಸಲರ ಸಮಸ್ಯೆ ಬಗ್ಗೆ ಪ್ರಸ್ತಾವಿಸಿದ ಅವರು, ಛತ್ತೀಸ್‌ಗಢದ ಬಸ್ತಾರ್‌ನಲ್ಲಿರುವ ನಕ್ಸಲರ ಕೇಂದ್ರ ಸ್ಥಾನಕ್ಕೆ ವಾಯುಯಾನ ಸಂಪರ್ಕ ವ್ಯವಸ್ಥೆಯನ್ನು ಸುಧಾರಣೆಗೊಳಿಸಲಾಗಿದೆ. ಬ್ಯಾಂಕ್ ಶಾಖೆಗಳು ಮತ್ತು ಅಂಚೆಕಚೇರಿಯನ್ನು ಆರಂಭಿಸಲಾಗಿದೆ. ನಕ್ಸಲ್ ಬಾಧಿತ ಪ್ರದೇಶಗಳಲ್ಲಿ 2187 ಮೊಬೈಲ್ ಟವರ್ ನಿರ್ಮಿಸುವ ಮೂಲಕ ಮೂಲಭೂತ ವ್ಯವಸ್ಥೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ ಎಂದರು.
ಕೇಂದ್ರ ಸರಕಾರ ಕನಿಷ್ಟ 90 ಮಂದಿ ಶಂಕಿತ ಐಸಿಸ್ ಕಾರ್ಯಕರ್ತರನ್ನು ಬಂಧಿಸಿದ್ದು ಭಯೋತ್ಪಾದಕ ಗುಂಪಿನ ಬೆದರಿಕೆಯನ್ನು ನಿಯಂತ್ರಿಸಲಾಗಿದೆ. ದೇಶದಲ್ಲಿ ಮುಸ್ಲಿಮ್ ಜನಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಐಸಿಸ್ ಇಲ್ಲಿ ತನ್ನ ಪಾದ ಊರಲು ಸಾಧ್ಯವಾಗಿಲ್ಲ ಎಂದು ರಾಜನಾಥ್ ಸಿಂಗ್ ತಿಳಿಸಿದರು.







