26 ಕುಡಿಯುವ ನೀರು ಯೋಜನೆ ಕಾಮಗಾರಿಗಳು ಆರಂಭ-ಟಿ.ಬಿ.ಜಯಚಂದ್ರ

ತುಮಕೂರು,ಜೂ.3:ಹೇಮಾವತಿ ನಾಲೆಯಿಂದ ವಿವಿಧ ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸುವ 26 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ತ್ವರಿತವಾಗಿ ಕಾಮಗಾರಿಗಳನ್ನು ಪೂರೈಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸೂಚಿಸಿದ್ದಾರೆ.
ನಗರದ ಹೇಮಾವತಿ ನಾಲಾ ವಲಯ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಹೇಮಾವತಿ ಯೋಜನೆಯಿಂದ ತುಮಕೂರು ವಲಯದ ನಾಗಮಂಗಲ ಮತ್ತು ತುಮಕೂರು ನಾಲೆಗಳಲ್ಲಿ ಹೇಮಾವತಿ ನೀರನ್ನು ತಿಪಟೂರು, ತುರುವೇಕೆರೆ, ಚಿಕ್ಕನಾಯಕನಹಳ್ಳಿ ಮತ್ತು ತುಮಕೂರು ಪಟ್ಟಣಗಳಿಗೆ ಕುಡಿಯುವ ನೀರು ಒದಗಿಸಲು 26 ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು,ಇವುಗಳಲ್ಲಿ ಈಗಾಗಲೇ ಮೂರು ಕಾಮಗಾರಿಗಳು ಪೂರ್ಣಗೊಂಡಿದ್ದು,8 ಕಾಮಗಾರಿಗಳು ಪೂರ್ಣವಾಗಿ ಚಾಲನೆಗಾಗಿ ಬಾಕಿಯಾಗಿದೆ.7 ಕಾಮಗಾರಿಗಳು ಪ್ರಗತಿಯ ಹಂತದಲ್ಲಿದ್ದು 8 ಕಾಮಗಾರಿ ಗಳನ್ನು ಅನುಷ್ಠಾನಗೋಳಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು,ಈ ಕಾಮಗಾರಿಗಳನ್ನು ತ್ವರಿತಗೊಳಿಸಿ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳುವಂತೆ ಸೂಚಿಸಿದರು.
ಹೇಮಾವತಿ ನಾಲೆಯಿಂದ ಜಿಲ್ಲೆಯ ಕೆಲವು ತಾಲ್ಲೂಕುಗಳಿಗೆ ನೀರನ್ನು ಒದಗಿಸಲು ಮುಂಬರುವ ಮುಗಾರು ಹಂಗಾಮಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸಚಿವರು ತಿಪಟೂರು,ತುರುವೇಕೆರೆ, ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರ ಮತ್ತು ತುಮಕೂರು ನಗರ ಶಾಸಕರೊಂದಿಗೆ ಸಮಾಲೋಚನೆ ನಡೆಸಿದ ಸಚಿವರು,ಕಳೆದ ಸಾಲಿನಲ್ಲಿ ತುಮಕೂರು ಜಿಲ್ಲೆಗೆ ನಿಗದಿಪಡಿಸಿದ ಪ್ರಮಾಣ 8 ಟಿ.ಎಂ.ಸಿ ನೀರನ್ನು ಜಿಲ್ಲೆಗೆ ಕೊಡಲು ಸಹ ಸಾಧ್ಯವಾಗದ ಕಾರಣ, ಜಿಲ್ಲೆಯಲ್ಲಿ ಕುಡಿಯುವ ನೀರಿಗೂ ತುಂಬಾ ತೊಂದರೆಯಾದ ಬಗ್ಗೆ ಸಚಿವರ ಗಮನಕ್ಕೆ ತಂದ ಶಾಸಕರು, ಈ ಬಾರಿ ಮುನ್ನೆಚ್ಚರಿಕೆ ವಹಿಸಿ ಜಿಲ್ಲೆಗೆ ನೀಗದಿಯಾಗಿರುವ 25 ಟಿ.ಎಂ.ಸಿ ನೀರಿನ ಪಾಲನ್ನು ಪಡೆಯುವಲ್ಲಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.
ಸಭೆಯಲ್ಲಿ ಶಾಸಕರಾದ ಸುರೇಶ್ ಬಾಬು,ಕೆ.ಷಡಕ್ಷರಿ,ಬಿ.ಸುರೇಶ್‌ಗೌಡ ಉಪಸ್ಥಿತರಿದ್ದರು.





