ಕೌಶಲ್ಯಾಭಿವೃದ್ಧಿ ಕಾರ್ಯಕ್ಕೆ ಖಾಸಗಿ ಸಂಸ್ಥೆಗಳು ಕೈಜೋಡಿಸಲಿ: ಎಂ.ವಿ. ರಾಜಶೇಖರನ್

ತುಮಕೂರು,ಜೂ.03:ಸರಕಾರದ ವತಿಯಿಂದ ನಡೆಯುತ್ತಿರುವ ಸುಮರು 80 ನಿಗಮಗಳಲ್ಲಿ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ ಬೆಂಗಳೂರು ಅಗ್ರಗಣ್ಯವೆನಿಸಿದೆ ಎಂದು ಮಾಜಿ ರಾಜ್ಯಸಭಾ ಸದಸ್ಯ ಎಂ.ವಿ.ರಾಜಶೇಖರನ್ ತಿಳಿಸಿದ್ದಾರೆ.
ನಗರದ ಶ್ರೀ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ಡಾ.ಶಿವಕುಮಾರಸ್ವಾಮೀಜಿ ಕೌಶಲ್ಯ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ ಹಾಗೂ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತಿದ್ದ ಅವರು,ಕೇಂದ್ರ ಸರಕಾರದ ಯೋಜನೆಯಾದ 40ಕೋಟಿ ಯುವಕ, ಯುವತಿಯರಿಗೆ ತರಬೇತಿ ನೀಡಿ,ಕೌಶಲ್ಯವಂತರನ್ನಾಗಿಸುವುದು,ಬರೀ ಸರಕಾರಿ ಸಂಸ್ಥೆಗಳಿಂದ ಮಾತ್ರ ಸಾಧ್ಯವಿಲ್ಲ. ಖಾಸಗೀ ಸಂಸ್ಥೆಗಳು ಕೈಜೋಡಿಸಿದಲ್ಲಿ ಮಾತ್ರ ಈ ಯೋಜನೆ ಸಾಕಾರಗೊಂಡು ದೇಶದ ಅಭಿವೃದ್ಧಿಯಾಗಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಮಾತನಾಡಿ,ರಾಜ್ಯ ಸರಕಾರವು ಕೌಶಲ್ಯಾಭಿವೃದ್ಧಿ ನಿಗಮಕ್ಕೆ ಒಂದು ವರ್ಷದ ಗುರಿಯನ್ನು ನಿಗದಿಪಡಿಸಿದ್ದು, ಸದರಿ ಗುರಿಯನ್ನು ನಿಗಮವು ಕೇವಲ 15 ದಿನಗಳಲ್ಲಿ ಸಾಧಿಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರಲ್ಲದೆ,ಪ್ರತಿ ತಿಂಗಳು ಒಂದೊಂದು ಕಾರ್ಯಕ್ರಮವನ್ನು ನಿಗಮವು ಹಮ್ಮಿಕೊಳ್ಳುತ್ತಿದ್ದು,ಈ ತಿಂಗಳ 15 ರಂದು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಕೌಶಲ್ಯ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಆರ್.ಎಚ್.ಆರ್.ಟಿ.ಎಫ್. ಅಧ್ಯಕ್ಷ ನಟರಾಜು ಹಾಗೂ ವಿಶ್ವನಾಥ್ ಅವರುಗಳು ಪ್ರಸ್ತುತ ಸನ್ನಿವೇಶದಲ್ಲಿ ಕೌಶಲ್ಯಾಭಿವೃದ್ಧಿಯ ಅವಶ್ಯಕತೆ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಜಗದೀಶ್, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.







