ಕಸಾಪ ಸಭೆ : ಸಮ್ಮೇಳನ ಯಶಸ್ವಿಗೊಳಿಸಲು ಶಾಸಕ ಅಪ್ಪಚ್ಚುರಂಜನ್ ಕರೆ

ಮಡಿಕೇರಿ ಜೂ.3 : ಮಡಿಕೇರಿ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಸರ್ವರೂ ಕೈಜೋಡಿಸಬೇಕೆಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮನವಿ ಮಾಡಿದರು.
ಮಡಿಕೇರಿ ತಾಲೂಕು ಸಾಹಿತ್ಯ ಪರಿಷತ್ತು ವತಿಯಿಂದ 8ನೇ ಸಾಹಿತ್ಯ ಸಮ್ಮೇಳನ ಸಂಬಂಧ ಇಲ್ಲಿನ ಕೋಟೆ ಹಳೇ ವಿಧಾನ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕರು, ಸಮ್ಮೇಳನದ ಯಶಸ್ಸಿಗೆ ಕನ್ನಡಾಭಿಮಾನಿಗಳ ಸಹಕಾರ ಅತ್ಯಗತ್ಯ. ಪರಿಷತ್ತು ಸರಕಾರದ ಒಂದು ಭಾಗವಾಗಿರುವದರಿಂದ ಸರಕಾರಿ ಅಧಿಕಾರಿಗಳ ಪಾಲ್ಗೊಳ್ಳುವಿಕೆ ಮುಖ್ಯವಾಗಿರುತ್ತದೆ. ಅಧಿಕಾರಿಗಳ ಸಹಕಾರ ನೀಡುವಂತೆ ಕೋರಿದರು.
ಸಮ್ಮೇಳನದಲ್ಲಿ ಮೆರವಣಿಗೆ, ಸಮಾರಂಭ, ಊಟದ ವಿಚಾರ ಸೇರಿದಂತೆ ಯಾವದೇ ಲೋಪಗಳು ಕಂಡುಬಾರದಂತೆ ಅಚ್ಚುಕಟ್ಟಾಗಿ ನೆರವೇರಲು ಅಧಿಕಾರಿಗಳ ಸಹಿತ ಉಪಸಮಿತಿಗಳು ಜವಾಬ್ದಾರಿ ವಸಿಕೊಳ್ಳಬೇಕೆಂದು ಸಲಹೆ ಮಾಡಿದರು. ಆರ್ಥಿಕ ಸಂಪನ್ಮೂಲ ಕ್ರೋಢಿಕರಣದ ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುಂತೆ ಸೂಚನೆ ನೀಡಿದರು. ಸಮ್ಮೇಳನಕ್ಕೆ ಎಲ್ಲ ರೀತಿಯ ಸಹಕಾರ ನೀಡುವದಾಗಿ ಹೇಳಿದರು.
ವಿಧಾನ ಪರಿಷತ್ ಸದಸ್ಯರುಗಳಾದ ಶಾಂತೆಯಂಡ ವೀಣಾ ಅಚ್ಚಯ್ಯ, ಎಂ.ಪಿ. ಸುನಿಲ್ ಸುಬ್ರಮಣಿ ಅವರುಗಳು ಕೂಡ ಸಮ್ಮೇಳನಕ್ಕೆ ಕೂಡ ಸಮ್ಮೇಳನಕ್ಕೆ ಎಲ್ಲ ರೀತಿಯ ಸಹಕಾರ ನೀಡುವದಾಗಿ ಹೇಳಿದರು. ಕ.ಸಾ.ಪ. ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಸಮ್ಮೇಳನದ ಉದ್ದೇಶದ ಬಗ್ಗೆ ವಿವರಿಸಿದರು.ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಸಮ್ಮೇಳನಕ್ಕೆ ಸರ್ವರೂ ಸಹಕಾರ ನೀಡಿ ಯಶಸ್ವಿಗೊಳಿಸಿ ಕೊಡುವಂತೆ ಮನವಿ ಮಾಡಿಕೊಂಡರು.
ಇದೇ ಸಂದರ್ಭ ಶಾಸಕರ ಸಮ್ಮುಖದಲ್ಲಿ ಅಧಿಕಾರಿಗಳನ್ನೊಳಗೊಂಡು ಉಪಸಮಿತಿಗಳಿಗೆ ಸೇರ್ಪಡೆಗೊಳಿಸಲಾಯಿತು. ಸಭೆಯಲ್ಲಿದ್ದ ಉಪಸಮಿತಿಗಳ ಪದಾಧಿಕಾರಿಗಳು ಈಗಾಗಲೇ ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ನಗರಸಭಾಧ್ಯಕ್ಷೆ ಕೂಡಕಂಡಿ ಕಾವೇರಮ್ಮ ಸೋಮಣ್ಣ, ಮೂಡಾ ಅಧ್ಯಕ್ಷ ಚುಮ್ಮಿದೇವಯ್ಯ, ಕ.ಸಾ.ಪ ಜಿಲ್ಲಾ ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್, ತಾಲೂಕು ಗೌರವ ಕಾರ್ಯದರ್ಶಿ ಬಾಳೆಯಡ ಕಿಶನ್ ಪೂವಯ್ಯ, ಕೂಡಕಂಡಿ ದಯಾನಂದ, ಉಪಸಮಿತಿಗಳ ಪದಾಧಿರಿಗಳು, ಸದಸ್ಯರುಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.







