ಮುಂಗಾರಿನ ನಿರೀಕ್ಷೆಯಲ್ಲಿ ಕಾವೇರಿನಾಡು ಕೊಡಗು

ಮಡಿಕೇರಿ ಜೂ.3 : ಪ್ರಸಕ್ತ ಸಾಲಿನ ಮೇ ಕೊನೆಯ ವಾರದಲ್ಲಿ ಕೇರಳವನ್ನು ಪ್ರವೇಶಿಸಿದ ಮಳೆಯ ಮಾರುತಗಳು ನಿರೀಕ್ಷೆಯಂತೆಯೆ ಜೂನ್ ಮೊದಲೆರಡು ದಿನಗಳು ಕಳೆಯುವ ಹಂತದಲ್ಲೆ ಕರಾವಳಿ ಭಾಗಕ್ಕೆ ಉತ್ತಮ ಮಳೆ ಸುರಿಸಲಾರಂಭಿಸಿವೆ.
ಆದರೆ ಕಾವೇರಿ ನಾಡು ಕೊಡಗಿನಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಬಿಸಿಲಿನ ಬೇಗೆಯೂ ಮುಂದುವರೆದಿದೆ.ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಈ ಬಾರಿಯ ಮುಂಗಾರು ಆಶಾದಾಯಕವಾಗಿದೆ ಎನ್ನುವುದು ನೆಮ್ಮದಿಯನ್ನು ನೀಡಿದ್ದರೂ, ಅದು ಉತ್ತಮ ಮಳೆೆಯಾಗಿ ಸಾಕಾರಗೊಂಡಾಗಷ್ಟೆ ಜಿಲ್ಲೆಯ ಜನತೆಯನ್ನು ಒಳಗೊಂಡಂತೆ ಕಾವೇರಿ ಆಶ್ರಿತ ಪ್ರದೇಶಗಳ ಜನತೆ ನಿರಾಳರಾಗಲು ಸಾಧ್ಯ.
ಜಿಲ್ಲೆಯಾದ್ಯಂತ ಜೂನ್ ಆರಂಭದ ಬಳಿಕ ಆಗೊಮ್ಮೆ ಈಗೊಮ್ಮೆ ಎಂಬಂತೆ ಹದವಾಗಿ ಮಳೆ ಸುರಿಯಲಾರಂಭಿಸಿದ್ದರು, ಅದು ಮುಂಗಾರಿನ ಅಬ್ಬರದ ಮಳೆಯಾಗಿ ಪರಿವರ್ತನೆಯಾಗಿಲ್ಲ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಶನಿವಾರ ಹಗಲಿನಲ್ಲಿ ಬಿಸಿಲು, ಮೋಡ, ಹನಿಮಳೆಯ ವಾತಾವರಣ ಕಂಡುಬಂದಿತು.
ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿ, ಭಾಗಮಂಡಲ ವ್ಯಾಪ್ತಿಯಲ್ಲಿ ಇನ್ನಷ್ಟೆ ಮುಂಗಾರು ಮಳೆ ಆರಂಭವಾಗಬೇಕಾಗಿದೆ. ಕೆಆರ್‌ಎಸ್ ಒಡಲು ತುಂಬುವ ಕೊಡಗಿನ ಮಳೆ- ಮುಂಗಾರಿನ ಅವಧಿಯಲ್ಲಿ ಸರ್ವೇ ಸಾಮಾನ್ಯವಾಗಿ ಎಲ್ಲರ ದೃಷ್ಟಿ ಕೆಆರ್‌ಎಸ್‌ನತ್ತ ಮತ್ತು ಅದರ ಒಡಲು ತುಂಬಲು ಕಾರಣವಾಗುವ ಕೊಡಗಿನ ಮುಂಗಾರು ಮಳೆಯತ್ತ ಸಾಗಿದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾದಲ್ಲಿ ಕೆಆರ್‌ಎಸ್ ಭರ್ತಿಯಾಗುತ್ತದೆ, ಅದರೊಂದಿಗೆ ಕರ್ನಾಟಕ ಮತ್ತು ತಮಿಳುನಾಡು ನಡುವಣ ನೀರಿನ ಹಂಚಿಕೆಯ ವಿವಾದ ಆ ವರ್ಷದ ಮಟ್ಟಿಗೆ ತಣ್ಣಗಾಗಿ ಬಿಡುತ್ತದೆ.
ಕಳೆದ ಸಾಲಿನಲ್ಲಿ ಕೊಡಗನ್ನು ಒಳಗೊಂಡಂತೆ ರಾಜ್ಯಾದ್ಯಂತ ಮುಂಗಾರು ವಿಫಲವಾಗಿ ಕುಡಿಯುವ ನೀರಿನ ಹಾಹಾಕಾರ ಮುಗಿಲು ಮುಟ್ಟಿತ್ತು.







