ಜಿಎಸ್‌ಟಿ: ಆರು ಸರಕುಗಳ ತೆರಿಗೆ ಪ್ರಮಾಣ ನಿರ್ಧಾರ

ಹೊಸದಿಲ್ಲಿ, ಜೂ.3: ಜುಲೈ 1ರಿಂದ ಜಾರಿಗೆ ಬರಲಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯಲ್ಲಿ ಆರು ಸರಕುಗಳ ಮೇಲೆ ವಿಧಿಸಲಾಗುವ ತೆರಿಗೆಯ ಬಗ್ಗೆ ವಿತ್ತ ಸಚಿವ ಅರುಣ್ ಜೇಟ್ಲೀ ಅಧ್ಯಕ್ಷತೆಯಲ್ಲಿ ನಡೆದ ಜಿಎಸ್‌ಟಿ ತೆರಿಗೆ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
500 ರೂ.ಗಿಂತ ಕಡಿಮೆ ಬೆಲೆಯ ಪಾದರಕ್ಷೆಗಳ ಮೇಲೆ ಶೇ.5 ತೆರಿಗೆ, ಉಳಿದವುಗಳಿಗೆ ಶೇ.18ರ ಪ್ರಮಾಣದಲ್ಲಿ ತೆರಿಗೆ ವಿಧಿಸಲಾಗುತ್ತದೆ. ಚಿನ್ನದ ಮೇಲೆ ಶೇ.3, ಬಿಸ್ಕತ್ತುಗಳ ಮೇಲೆ ಶೇ.18, ಪ್ಯಾಕ್ ಮಾಡಿರುವ ಖಾದ್ಯ ವಸ್ತುಗಳ ಮೇಲೆ ಶೇ.5, ಬೀಡಿಯ ಮೇಲೆ ಶೇ.28, ಬೀಡಿ ಸುತ್ತಲು ಬಳಸುವ ಎಲೆಗಳ ಮೇಲೆ ಶೇ.18ರಷ್ಟು ತೆರಿಗೆ ವಿಧಿಸಲಾಗುತ್ತದೆ.
ಸಿದ್ಧ ಉಡುಪುಗಳ ಮೇಲೆ ಶೇ.12ರಷ್ಟು ತೆರಿಗೆ ವಿಧಿಸುವ ಸಂಭವವಿದೆ. ಹತ್ತಿ ಬಟ್ಟೆಗಳ ಮೇಲೆ ಮತ್ತು ಹತ್ತಿ ನೂಲಿನ ಮೇಲೆ ಶೇ.5ರಷ್ಟು, ಸೋಲಾರ್ ಪ್ಯಾನೆಲ್‌ಗಳ ಮೇಲೆ ಶೇ.5ರಷ್ಟು ತೆರಿಗೆ ಬೀಳಲಿದೆ. ಶೇ.5, ಶೇ.12 ಮತ್ತು ಶೇ.28- ಈ ಹಂತದಲ್ಲಿ ತೆರಿಗೆ ವಿಧಿಸಲಾಗುವುದು ಮತ್ತು ಈ ಹಂತದ ತೆರಿಗೆಗೆ ಒಳಪಡುವ ಸುಮಾರು 1,200 ಸರಕು ಮತ್ತು 500 ಸೇವೆಗಳನ್ನು ಸಮಿತಿ ಗುರುತಿಸಿದೆ.





