ಮೈಸೂರು: ಅಪಘಾತ ಗಾಯಾಳುವಿಗೆ ಆಸರೆಯಾದ ಸಚಿವ ಯು.ಟಿ.ಖಾದರ್, ಸಂಗಡಿಗರು

ಬೆಂಗಳೂರು, ಜೂ. 3: ಮೈಸೂರಿನಲ್ಲಿ ಕಾರ್ಯಕ್ರಮ ಮುಗಿಸಿ ಶನಿವಾರ ಸಂಜೆ ಮಂಗಳೂರು ಕಡೆ ಕಾರಲ್ಲಿ ಮರಳುತ್ತಿದ್ದ ಆಹಾರ ಸಚಿವರಾದ ಯು.ಟಿ.ಖಾದರ್ ಮತ್ತು ಸಂಗಡಿಗರಿಗೆ ಹಿನಕಲ್ ರಸ್ತೆಯಲ್ಲಿ ಅಪಘಾತವಾಗಿ ನರಳುತ್ತಿದ್ದ ಗಾಯಾಳುವನ್ನು ಕಂಡಿದ್ದು, ತಕ್ಷಣ ಕಾರು ನಿಲ್ಲಿಸಿದ ಸಚಿವರು ಮಾನವೀಯತೆ ಮೆರೆದಿದ್ದಾರೆ.
ಹಿನಕಲ್ ಸಮೀಪ ಸಂಚರಿಸುತ್ತಿದ್ದ ಇಂತಿಯಾಝ್ ಎಂಬವರ ಬೈಕ್ ಗೆ ದನವೊಂದು ಅಡ್ಡ ಬಂದ ಪರಿಣಾಮ ಬೈಕ್ ಮಗುಚಿ ಸವಾರ ಇಂತಿಯಾಝ್ ರ ತಲೆಗೆ ಗಾಯವಾಗಿತ್ತು. ಅಲ್ಲಿ ನೆರೆದವರು ಅಂಬುಲೆನ್ಸ್ ಗೆ ಕರೆಯೂ ಮಾಡಿದ್ದರು. ಆದರೆ ಅಂಬುಲೆನ್ಸ್ ಬರುವ ಮೊದಲೇ ಸೂಕ್ತ ಸಂದರ್ಭ ಅಲ್ಲಿಗೆ ತಲುಪಿದ ಸಚಿವರಾದ ಯು.ಟಿ.ಖಾದರ್ ಗಾಯಾಳುವನ್ನು ಎತ್ತಿ ತನ್ನ ಕಾರಲ್ಲಿ ಹಾಕಿ ಮೈಸೂರಿನ ಆಸ್ಪತ್ರೆಗೆ ದಾಖಲಿಸಿದರು.
ಸಚಿವರ ಸೇವೆಗೆ ಗೋಪಾಲ ಶೆಟ್ಟಿ ತಲಪಾಡಿ, ಅರುಣ್ ಕುಮಾರ್ ಕಾಪಿಕಾಡು, ಶ್ರೇಯಸ್ ಗೌಡ ಮೈಸೂರು, ಆಪ್ತ ಸಹಾಯಕ ಲಿಬ್'ಝತ್, ಕಾರು ಚಾಲಕ ಮೋಹನ ಸಾಥ್ ನೀಡಿದರು.
ಸಚಿವರು ಈ ಹಿಂದೆ ಕೂಡಾ ಹಲವು ಅಪಘಾತ ಗಾಯಾಳುಗಳಿಗೆ ಆಸರೆಯಾದುದನ್ನು ಇಲ್ಲಿ ಸ್ಮರಿಸಬಹುದು.





