ಅಣು ಒಪ್ಪಂದಕ್ಕೆ ಇರಾನ್ ಬದ್ಧತೆ: ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ ವರದಿ

ವಿಯೆನ್ನಾ (ಆಸ್ಟ್ರಿಯಾ), ಜೂ.2: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜೊತೆಗೆ ಬಾಂದವ್ಯದಲ್ಲಿ ಉದ್ವಿಗ್ನತೆಯೇರ್ಪಟ್ಟ ಹೊರತಾಗಿಯೂ ಇರಾನ್ 2015ರ ಅಣು ಒಪ್ಪಂದಕ್ಕೆ ಬದ್ಧವಾಗಿ ನಡೆದುಕೊಂಡಿದೆಯೆಂದು ವಿಶ್ವಸಂಸ್ಥೆಯ ಅಣುಶಕ್ತಿ ಕಣ್ಗಾವಲು ಸಂಸ್ಥೆಯೊಂದರ ವರದಿ ಶುಕ್ರವಾರ ತಿಳಿಸಿದೆ.
ಇರಾನ್ ಜೊತೆಗಿನ ಅಣು ಒಪ್ಪಂದವು ವಿನಾಶಕಾರಿಯಾಗಿದ್ದು, ಅದನ್ನು ರದ್ದುಪಡಿಸುವುದಾಗಿ ಇತ್ತೀಚೆಗೆ ಘೋಷಿಸಿದ್ದ ಟ್ರಂಪ್, ಟೆಹರಾನ್ ಅನ್ನು ಏಕಾಂಗಿಯಾಗಿಸಬೇಕೆಂದು ಕರೆ ನೀಡಿದ್ದರು.
ಆದರೆ ಇರಾನ್‌ನ ಅಣುಶಕ್ತಿ ಚಟುವಟಿಕೆಗಳು ಕುಂಠಿತಗೊಂಡಿರುವುದನ್ನು ಅಂತಾರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ)ಯ ವರದಿಯು ತೋರಿಸಿಕೊಟ್ಟಿದೆ. ಇರಾನ್‌ನ ಬಳಿಯಿದ್ದ ಕಡಿಮೆ ಸಂವರ್ಧನೆಯ ಯುರೇನಿಯಂ ದಾಸ್ತಾನನ್ನು ಶಾಂತಿಯುತ ಉದ್ದೇಶಗಳಿಗಾಗಿ ಬಳಸಕೊಳ್ಳಲಾಗಿದೆ ಎಂದು ವರದಿ ಹೇಳಿದೆ.
ಅಣ್ವಸ್ತ್ರಗಳ ತಯಾರಿಕೆಗೆ ಬೇಕಾದಂತಹ ದರ್ಜೆಯ ಪ್ಲೊಟೊನಿಯಂನ್ನು ಉತ್ಪಾದಿಸುವ ಆರಾಕ್ ರಿಯಾಕ್ಟರ್‌ನ ನಿರ್ಮಾಣ ಕಾರ್ಯವನ್ನು ಇರಾನ್ ಕೈಗೆತ್ತಿಕೊಂಡಿಲ್ಲವೆಂದು ಏಜೆನ್ಸಿಯ ತ್ರೈಮಾಸಿಕ ವರದಿ ತಿಳಿಸಿದೆ.
ಇರಾನ್ 128.2 ಟನ್‌ನಷ್ಟು ರಿಯಾಕ್ಟರ್‌ಗಳನ್ನು ತಂಪುಗೊಳಿಸುವ ಭಾರಜಲದ ದಾಸ್ತಾನನ್ನು ಹೊಂದಿದೆ. ಒಡಂಬಡಿಕೆಯ ಸಂದರ್ಭದಲ್ಲಿ ಇರಾನ್ ತನ್ನ ಸಂಗ್ರಹದಲ್ಲಿರುವ ಭಾರಜಲದ ದಾಸ್ತಾನನ್ನು 130 ಟನ್‌ಗಳಿಗೆ ಮಿತಿಗೊಳಿಸಲು ಒಪ್ಪಿತ್ತು. ಹೆಚ್ಚುವರಿ ಭಾರ ಜಲವನ್ನು ಅದು ವಿದೇಶಗಳಿಗೆ ರವಾನಿಸಿತ್ತು.
ಹಲವು ವರ್ಷಗಳ ಸುದೀರ್ಘ ಸಂಧಾನಗಳ ಬಳಿಕ ಇರಾನ್ ಜೊತೆ ಅಮೆರಿಕ, ರಶ್ಯ, ಚೀನಾ, ಫ್ರಾನ್ಸ್, ಬ್ರಿಟನ್ ಹಾಗೂ ಜರ್ಮನಿ ದೇಶಗಳು ಅಣುಶಕ್ತಿ ನಿಯಂತ್ರಣ ಒಪ್ಪಂದಕ್ಕೆ ಸಹಿಹಾಕಿದ್ದು, 2016ರ ಜನವರಿಯಲ್ಲಿ ಅದು ಜಾರಿಗೆ ಬಂದಿತ್ತು.







