ಪುತ್ತೂರು: ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗೆ ಸನ್ಮಾನ

ಪುತ್ತೂರು, ಜೂ.3: ವಕೀಲರ ಸಂಘದ ಮನವಿಯಂತೆ ಬೆಳ್ತಂಗಡಿ ವ್ಯಾಪ್ತಿಯ ಜಿಲ್ಲಾ ಮಟ್ಟದ ನ್ಯಾಯಾಲಯ ಪ್ರಕರಣವನ್ನು ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ಣಾಟಕ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ದ.ಕ. ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ನ್ಯಾಯಮೂರ್ತಿ ಎ.ಎನ್. ವೇಣುಗೋಪಾಲ ಗೌಡ ತಿಳಿಸಿದರು.
ಅವರು ಶನಿವಾರ ಪುತ್ತೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ನ್ಯಾಯಾಲಯ ಸಂಕೀರ್ಣದ ಪರಾಶರ ಸಭಾಭವನದಲ್ಲಿ ಪುತ್ತೂರು ವಕೀಲರ ಸಂಘದ ವತಿಯಿಂದ ಏರ್ಪಡಿಸಿದ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬೆಳ್ತಂಗಡಿ ಸೆಷನ್ ನ್ಯಾಯಾಲಯದ ಜಿಲ್ಲಾ ಮಟ್ಟದ ಪ್ರಕರಣಗಳು ಮಂಗಳೂರಿನ ಜಿಲ್ಲಾ ನ್ಯಾಯಾಲಯಕ್ಕೆ ಹೋಗುತ್ತಿದ್ದು, ಬೆಳ್ತಂಗಡಿಯು ಪುತ್ತೂರು ಉಪ ವಿಭಾಗ ವ್ಯಾಪ್ತಿಗೆ ಬರುವುದರಿಂದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ವ್ಯಾಪ್ತಿಗೆ ಈ ಪ್ರಕರಣಗಳನ್ನು ತರಲು ಶೀಘ್ರ ಕ್ರಮ ಕೆಗೊಳ್ಳುವುದಾಗಿ ಅವರು ತಿಳಿಸಿದರು.
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಗೌಡ ಕೋಡಿಂಬಾಳ ಅವರ ಮನವಿಗೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿಗಳು ಪುತ್ತೂರಿನ ನ್ಯಾಯಾಲಯ ಕಟ್ಟಡಕ್ಕೆ ಈ ಬಾರಿ ಅನುದಾನ ಲಭ್ಯವಿಲ್ಲ. ರಾಜ್ಯದ ಎಲ್ಲೂ ನ್ಯಾಯಾಲಯ ಕಟ್ಟಡಕ್ಕೆ ಈ ಬಾರಿ ಅನುದಾನ ನಿಗದಿ ಮಾಡಿಲ್ಲ. ಮುಂದಿನ ಬಾರಿ ನೀಡಲಾಗುವುದು ಎಂದು ಹಣಕಾಸು ಕಾರ್ಯದರ್ಶಿ ಭರವಸೆ ನೀಡಿದ್ದಾರೆ. ವಕೀಲರ ಸಂಘ ಮುಂದಿಟ್ಟ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕಾಗಿ ಪ್ರಯತ್ನಿಸುವುದಾಗಿ ತಿಳಿಸಿದರು.
ಮೂಲಭೂತ ಹಕ್ಕುಗಳ ಕುರಿತು ಮಾತನಾಡುವವರು ಕರ್ತವ್ಯವನ್ನು ಮರೆಯುತ್ತಿದ್ದಾರೆ ಎಂದು ವಿಷಾಧಿಸಿದ ಅವರು ದೇಶದ ಸ್ವಾತಂತ್ರ್ಯ ಆಂದೋಲನದಲ್ಲಿ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ವಕೀಲರು ದೇಶಮುಖಿಯಾಗಿ ಕೆಲಸ ಮಾಡುವುದು ಕಡಿಮೆಯಾಗಿದ್ದು, ಈ ಧೋರಣೆ ಬದಲಾಗಬೇಕು ಎಂದರು.
ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಮಚಂದ್ರ ಎಂ., ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಕೆ. ಬಸವರಾಜ್, ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುನಾಥ್, ಪ್ರಧಾನ ಸಿವಿಲ್ ನ್ಯಾಯಾಧೀಶ ಪಿ.ಎಂ. ಪ್ರಕಾಶ್, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಕಿಶನ್ ಬಿ. ಮಡಲಗಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನ್ಯಾಯಮೂರ್ತಿ ವೇಣುಗೋಪಾಲ ಗೌಡ ಮತ್ತು ಗಿರಿಜಾ ವೇಣುಗೋಪಾಲ್ ಅವರನ್ನು ವಕೀಲರ ಸಂಘದ ತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಮನವಿ ಸಲ್ಲಿಕೆ:
ಪುತ್ತೂರು ತಾಲೂಕಿನ ಎಂಟು ಗ್ರಾಮಗಳು ಪುತ್ತೂರು ನ್ಯಾಯಾಲಯದ ಕೈತಪ್ಪಿ ಸುಳ್ಯ ನ್ಯಾಯಾಲಯಕ್ಕೆ ಹೋಗಿದ್ದು, ಅದನ್ನು ಮತ್ತೆ ಪುತ್ತೂರು ನ್ಯಾಯಾಲಯದ ವ್ಯಾಪ್ತಿಗೆ ತರಬೇಕೆಂದು ಈ ಸಂದರ್ಭ ವಕೀಲರ ಸಂಘ ಮನವಿ ಸಲ್ಲಿಸಿತು.
ಬೆಳ್ಳಾರೆ ಪೊಲೀಸ್ ಠಾಣೆ ಆರಂಭಗೊಂಡ ನಂತರ ಪುತ್ತೂರು ತಾಲೂಕಿನ ಎಂಟು ಗ್ರಾಮಗಳು ಆ ಠಾಣಾ ವ್ಯಾಪ್ತಿಗೆ ಹೋಗಿವೆ. ಹಿಂದೆ ಇವೆಲ್ಲ ಕಡಬ ಠಾಣಾ ವ್ಯಾಪ್ತಿಯಲ್ಲಿದ್ದರೂ ತಾಲೂಕು ಕೇಂದ್ರವಾದ ಪುತ್ತೂರಿನ ನ್ಯಾಯಾಲಯಕ್ಕೆ ಒಳಪಟ್ಟಿತ್ತು. ಈಗ ಬೆಳ್ಳಾರೆ ಠಾಣೆ ವ್ಯಾಪ್ತಿಗೆ ಹೋದರೂ ತಾಲೂಕು ಪುತ್ತೂರೇ ಆಗಿರುವ ಕಾರಣ ಪುತ್ತೂರು ಕೋರ್ಟ್ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಲಾಯಿತು.
ಎಂಎಂಆರ್‌ಡಿ, ಲೋಕಾಯುಕ್ತ ಇವೇ ಮುಂತಾದ ಪ್ರಕರಣಗಳು ಕೂಡ ಪುತ್ತೂರು ನ್ಯಾಯಾಲಯದಲ್ಲಿ ವಿಚಾರಣೆಗೆ ಬರುವಂತೆ ವ್ಯವಸ್ಥೆ ಮಾಡಬೇಕು. ಸುಳ್ಯ ಮತ್ತು ಬೆಳ್ತಂಗಡಿಯಲ್ಲಿ ಹಿರಿಯ ಸಿವಿಲ್ ನ್ಯಾಯಾಲಯ ಮಾಡಿರುವ ಹಿನ್ನೆಲೆಯಲ್ಲಿ ಉಪ ವಿಭಾಗ ಕೇಂದ್ರವಾದ ಪುತ್ತೂರಿನ ನ್ಯಾಯಾಲಯಕ್ಕೆ ಶಕ್ತಿ ತುಂಬಲು ಈ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಯಿತು.
ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಭಾಸ್ಕರ ಕೋಡಿಂಬಾಳ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯದರ್ಶಿ ಕೃಷ್ಣ ಪ್ರಸಾದ್ ರೈ ಸ್ವಾಗತಿಸಿದರು. ಉಪಾಧ್ಯಕ್ಷ ಮಹಾಬಲ ಗೌಡ ವಂದಿಸಿದರು. ಮಹೇಶ್ ಮತ್ತು ಸುಧೀರ್ ತೋಳ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.
ಹಿರಿಯ ವಕೀಲರಾದ ಎನ್.ಕೆ. ಜಗನ್ನಿವಾಸ ರಾವ್, ಮಹೇಶ್ ಕಜೆ, ಎಂ.ಪಿ. ಅಬೂಬಕ್ಕರ್, ವಕೀಲರ ಸಂಘದ ಜತೆ ಕಾರ್ಯದರ್ಶಿ ದೀಪಕ್ ಬೊಳುವಾರ್, ಕೋಶಾಧಿಕಾರಿ ಕುಮಾರನಾಥ್ ಎಸ್. ಉಪಸ್ಥಿತರಿದ್ದರು.







