ದಲಿತ ಕೇರಿಗಳಿಗೆ ಭೇಟಿ ಸಹಿಸದ ಕಾಂಗ್ರೆಸ್‌ನಿಂದ ವಿವಾದ ಸೃಷ್ಟಿ: ಯಡಿಯೂರಪ್ಪ ಆರೋಪ
ಬೆಂಗಳೂರು, ಜೂ.3: ಬರ ಪ್ರವಾಸದಲ್ಲಿ ದಲಿತ ಕೇರಿಗಳಿಗೆ ಭೇಟಿ ನೀಡುತ್ತಿರುವುದನ್ನು ಕಾಂಗ್ರೆಸ್ ಪಕ್ಷಕ್ಕೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ವಿವಾದ ಸೃಷ್ಟಿಸುತ್ತಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಆರೋಪಿಸಿದ್ದಾರೆ.
ಶನಿವಾರ ಬಿಜೆಪಿ ಕಚೇರಿಯಲ್ಲಿ ಬೆಂಗಳೂರು ನಗರ ಎಸ್ಸಿ ಮೋರ್ಚಾ ವತಿಯಿಂದ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ 3 ವರ್ಷಗಳಲ್ಲಿ ಪರಿಶಿಷ್ಟ ಜಾತಿಗಳಿಗೆ ನೀಡಿರುವ ಕಾರ್ಯಕ್ರಮಗಳು ಹಾಗೂ ಸರಕಾರದ ಸಾಧನೆಗಳನ್ನು ಬಿಂಬಿಸುವ ಎಲ್‌ಇಡಿ ಪ್ರಚಾರ ವಾಹನದ ಸಂಚಾರಕ್ಕೆ ಚಾಲನೆ ಕೊಟ್ಟು ಅವರು ಮಾತನಾಡಿದರು.
ಬರ ಪ್ರವಾಸ ಸಂದರ್ಭದಲ್ಲಿ ತಾವು ದಲಿತ ಕಾಲನಿಗಳಿಗೆ ಭೇಟಿ ನೀಡಿದಾಗ ಸಾವಿರಾರು ಜನ ಸೇರುತ್ತಿದ್ದಾರೆ. ಇದು ಕಾಂಗ್ರೆಸ್ ನಾಯಕರುಗಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ವಿಚಾರದ ಬಗ್ಗೆ ಹಗುರವಾಗಿ ಮಾತನಾಡುತ್ತಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಕಳೆದ 70 ವರ್ಷಗಳಿಂದ ದಲಿತರ ಕಾಲನಿಗಳು ಬದಲಾವಣೆಯಾಗಿಲ್ಲ. ಈಗಲಾದರೂ ಸರಕಾರ ದಲಿತರ ಕಾಲನಿಗಳಿಗೆ ಭೇಟಿ ನೀಡಲಿ. ನಾವು ಮುಂದೆ ಅಧಿಕಾರಕ್ಕೆ ಬಂದರೆ ದಲಿತರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವುದಾಗಿ ಅವರು ಹೇಳಿದರು.
ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ಅವರಿಗೆ ಕಾಂಗ್ರೆಸ್ ಪಕ್ಷ ಅಪಮಾನ ಮಾಡಿದೆ. ಅವರ ಶವಸಂಸ್ಕಾರಕ್ಕೆ ದೆಹಲಿಯ ರಾಜ್‌ಘಾಟ್‌ನಲ್ಲಿ ಕಾಂಗ್ರೆಸ್ ಜಾಗ ನೀಡಲಿಲ್ಲ. ಕಾಂಗ್ರೆಸ್ಸಿಗರಿಗೆ ದಲಿತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರಕಾರದಿಂದ ಬಿಡುಗಡೆಯಾಗಿರುವ ಬರ ಪರಿಹಾರದ ಹಣವನ್ನು ಸರಿಯಾಗಿ ಬಳಕೆ ಮಾಡುವುದರಲ್ಲಿ ಸರಕಾರ ಎಡವಿದೆ. ಜನರ ಮತ್ತು ರೈತರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಜವಾಬ್ದಾರಿಯಿಂದ ಚೆಲ್ಲಾಟವಾಡುತ್ತಿದ್ದಾರೆ ಎಂದು ಹೇಳಿದರು.
ನಾನು ಬರ ಪ್ರವಾಸಕ್ಕೆ ಹೋದಾಗ ಛತ್ರಿ ಹಿಡಿದುಕೊಂಡು ಪ್ರವಾಸಕ್ಕೆ ಹೋರಟಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದರು. ಈಗ ಅವರಿಗೆ ಪರಿಸ್ಥಿತಿ ಅರಿವಿಗೆ ಬಂದಿದೆ. ಈಗ ಮಳೆಗಾಗಿ ಹೋಮ ಹವನ ಮಾಡಲು ಮುಂದಾಗಿದ್ದಾರೆ ಎಂದು ಛೇಡಿಸಿದರು.
ಪ್ರತಿಕ್ರಿಯೆಗೆ ನಿರಾಕರಣೆ:
ಬಿಜೆಪಿಗೆ ದಲಿತರ ಮೇಲೆ ಪ್ರೀತಿ ಇದ್ದರೆ ರಾಜ್ಯಾಧ್ಯಕ್ಷ ಸ್ಥಾನವನ್ನು ದಲಿತರಿಗೆ ನೀಡಲಿ ಎಂಬ ಕಾಂಗ್ರೆಸ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಲು ಯಡಿಯೂರಪ್ಪ ನಿರಾಕರಿಸಿದರು.
ಈ ಸಂದರ್ಭದಲ್ಲಿ ಶಾಸಕ ಅಶ್ವತ್ಥ್ ನಾರಾಯಣ, ಎಸ್ಸಿ ಮೋರ್ಚಾದ ಅಧ್ಯಕ್ಷ ಡಿ.ಎಸ್ ವೀರಯ್ಯ,ಉಪಾಧ್ಯಕ್ಷ ಚಿ.ನಾ ರಾಮು, ಪಕ್ಷದ ಪ್ರಧಾನ ಕಾರ್ಯದರ್ಶಿ ರವಿ ಕುಮಾರ್, ನಗರ ಎಸ್ಸಿ ಮೋರ್ಚಾದ ಅಧ್ಯಕ್ಷ ಕೋದಂಡರಾಮ್ ಸೇರಿದಂತೆ ಇತರರು ಇದ್ದರು.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜೀವನಾಧಾರಿತ ಭೂಮಿ ಪುತ್ರ ಸಿನಿಮಾದ ಬೆನ್ನಲ್ಲೇ ತಮ್ಮ ಬದುಕನ್ನಾಧರಿಸಿದ ಸಿನಿಮಾ ನಿರ್ಮಾಣದ ಸುದ್ದಿ ಕೇಳಿ ಬಂದಿದ್ದ ಹಿನ್ನಲೆಯಲ್ಲಿ ಅನೇಕರು ಬಂದು ನನ್ನ ಜೀವನದ ಏಳು-ಬೀಳುಗಳ ಕುರಿತಂತೆ ಸಿನಿಮಾ ಮಾಡುವುದಾಗಿ ಕೇಳಿದ್ದರು. ಆದರೆ, ಅದಾವುದಕ್ಕೂ ನಾನು ಒಪ್ಪಿಗೆ ನೀಡಿಲ್ಲ. ಕೆಲ ಸುದ್ದಿ ಮಾಧ್ಯಮಗಳು ನನ್ನ ಜೀವನಾಧಾರಿತ ಸಿನಿಮಾ ಬರಲಿದೆ. ನಟ ಉಪೇಂದ್ರ ಅವರು ನನ್ನ ಪಾತ್ರವನ್ನು ಮಾಡುತ್ತಾರೆಂದು ಹೇಳುತ್ತಿವೆ. ನನ್ನ ಜೀವನಾಧಾರಿತ ಸಿನಿಮಾ ಮಾಡಲು ನಾನು ಬಿಡುವುದಿಲ್ಲ.
-ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ







