ಮಳೆ ಕೊಯ್ಲು ಮಾಡಿಸಿಕೊಳ್ಳದ ಮನೆ ಮಾಲಕರಿಂದ 7ಕೋಟಿ ರೂ.ದಂಡ ಸಂಗ್ರಹ
ಬೆಂಗಳೂರು, ಜೂ.3: ಬಿಬಿಎಂಪಿ ವ್ಯಾಪ್ತಿಯಲ್ಲಿ ಮಳೆಕೊಯ್ಲು ಮಾಡಿಸಿಕೊಳ್ಳದ ವಾಣಿಜ್ಯ ಕಟ್ಟಡ ಹಾಗೂ ಮನೆಗಳ ಮಾಲಕರಿಂದ ಇಲ್ಲಿಯವರೆಗೂ 7ಕೋಟಿ ರೂ.ದಂಡ ವನ್ನು ನಗರಾಡಳಿತ ವಸೂಲಿ ಮಾಡಿದೆ.
ನಗರದಲ್ಲಿ ನೀರಿಗಾಗಿ ಹಾಹಾಕಾರ ತಪ್ಪಿಸುವ ನಿಟ್ಟಿನಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಕಳೆದ ವರ್ಷದಿಂದ ನಗರದ ವಾಣಿಜ್ಯ ಮಳಿಗೆಗಳು ಹಾಗೂ ಮನೆಗಳಿಗೆ ಮಳೆಕೊಯ್ಲು ಕಡ್ಡಾಯಗೊಳಿಸಿತ್ತು. ಆದರೆ ಬಿಬಿಎಂಪಿ ಅಧ್ಯಯನ ಪ್ರಕಾರ ಜನರು ಮಳೆಕೊಯ್ಲು ಅಳವಡಿಸಿಕೊಳ್ಳಲು ಯಾವುದೇ ಆಸಕ್ತಿ ತೋರುತ್ತಿಲ್ಲ.
ನಗರದಲ್ಲಿ ಒಟ್ಟು 1.08 ಲಕ್ಷ ಕಟ್ಟಡಗಳಲ್ಲಿ ಮಳೆಕೊಯ್ಲು ಅಳವಡಿಸಿಕೊಳ್ಳಬೇಕಾಗಿದೆ. ಆದರೆ ಇದುವರೆಗೂ ಕೇವಲ 28ಸಾವಿರ ಕಟ್ಟಡದಲ್ಲಿ ಮಾತ್ರ ಮಳೆನೀರು ಕೊಯ್ಲು ಅಳವಡಿಸಿಕೊಳ್ಳಲಾಗಿದೆ. 2009 ರ ನಂತರ 1200 ಚದರ ಅಡಿಯಲ್ಲಿ ನಿರ್ಮಾಣಗೊಳ್ಳುವ ಎಲ್ಲ ಕಟ್ಟಡಗಳಿಗೂ ಮಳೆನೀರು ಕೊಯ್ಲು ಕಡ್ಡಾಯವೆಂದು ಸರಕಾರ ಆದೇಶ ಹೊರಡಿಸಿದೆ. ನಿಯಮ ಉಲ್ಲಂಘಿಸಿದರೆ ವಸತಿ ಕಟ್ಟಡಗಳಿಗೆ ನೀರು ಮತ್ತು ಒಳಚರಂಡಿ ಸಂಪರ್ಕದ ಮೇಲೆ ಮೊದಲ ಮೂರು ತಿಂಗಳು ಶೇ.25 ರಷ್ಟು ದಂಡ, ಮೂರು ತಿಂಗಳ ನಂತರ ಶೇ 50 ರಷ್ಟು ದಂಡ.
ಇನ್ನು ವಸತಿಯೇತರ ಕಟ್ಟಡಗಳಿಗೆ ಮೊದಲು ಮೂರು ತಿಂಗಳು ಶೇ 50 ಹಾಗೂ ನಂತರದಲ್ಲಿ 100 ರಷ್ಟ ದಂಡ ವಿಧಿಸಲಾಗುತ್ತದೆ. ಈ ಪ್ರಕಾರವಾಗಿ ಮನೆಕೊಯ್ಲು ಮಾಡಿಸಿಕೊಳ್ಳದ ಮನೆ ಹಾಗೂ ವಾಣಿಜ್ಯ ಕಟ್ಟಡದ ಮಾಲಕರಿಂದ ಜುಲೈ -2016ರಿಂದ ಎ.1 2017ರವರೆಗೆ ಒಟ್ಟು 7ಕೋಟಿ ರೂ.ದಂಡ ಸಂಗ್ರಹಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.





