ಮಳೆಗಾಲ ಮುಗಿಯುವಷ್ಟರಲ್ಲಿ 10ಲಕ್ಷ ಸಸಿ ನೆಡಲಾಗುವುದು: ಜಿ.ಪದ್ಮಾವತಿ
ಬೆಂಗಳೂರು, ಜೂ.3: ಬೆಂಗಳೂರಿಗಿದ್ದ ಉದ್ಯಾನನಗರಿ ಎಂಬ ಬಿರುದನ್ನು ಚಿರಸ್ಥಾಯಿಯಾಗಿಸುವ ನಿಟ್ಟಿನಲ್ಲಿ ಈ ಮಳೆಗಾಲ ಮುಗಿಯುಷ್ಟರಲ್ಲಿ 10ಲಕ್ಷ ಸಸಿಗಳನ್ನು ನೆಡಲಾಗುವುದು ಎಂದು ಮೇಯರ್ ಪದ್ಮಾವತಿ ತಿಳಿಸಿದ್ದಾರೆ.
ಶನಿವಾರ ಈ ಮಳೆಗಾಲದಲ್ಲಿ 10 ಲಕ್ಷ ಸಸಿ ನೆಡುವ ಮೂಲಕ ಬೆಂಗಳೂರನ್ನು ಹಸಿರು ನಗರ ಮಾಡುವ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಖಾಲಿ ಪ್ರದೇಶದಲ್ಲಿ ಗಿಡ-ಮರ ಬೆಳೆಸುವಂತೆ ಸಾರ್ವಜನಿಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ಗ್ರೀನ್‌ಆ್ಯಪ್ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು ಆ್ಯಪ್ ಮೂಲಕ ತಮ್ಮ ವ್ಯಾಪ್ತಿಯಲ್ಲಿ ಗಿಡ-ಮರ ಬೆಳೆಸುವ ಅಪೇಕ್ಷೆ ವ್ಯಕ್ತಪಡಿಸಿದರೆ ಮನೆ ಬಾಗಿಲಿಗೆ ಸಸಿ ನೀಡಲಾಗುವುದು ಎಂದು ತಿಳಿಸಿದರು.
ಗ್ರೀನ್‌ಆ್ಯಪ್ ಮೂಲಕ ಸಾರ್ವಜನಿಕರು ಒಂದು ಲಕ್ಷ ಸಸಿಗಳಿಗೆ ಬೇಡಿಕೆ ಸಲ್ಲಿಸಿದ್ದು, ಈ ಮಳೆಗಾಲದಲ್ಲಿ ಅವಶ್ಯವಿರುವ ಸಸಿ ವಿತರಿಸಲು ಬಿಬಿಎಂಪಿ ತೀರ್ಮಾನಿಸಿದೆ. ಹೀಗಾಗಿ ವಿವಿಧ ಪ್ರದೇಶಗಳಲ್ಲಿ ಬೆಳೆಸಲಾಗುತ್ತಿರುವ ಸಸಿಗಳ ಸ್ಥಿತಿಗತಿ ಅಧ್ಯಯನ ನಡೆಸಲು ಉದ್ದೇಶಿಸಿದ್ದು, ಈಗಾಗಲೆ 6 ತಂಡಗಳನ್ನು ರಚನೆ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಉಪ ಮಹಾಪೌರ ಆನಂದ್ ಅಟ್ಟೂರಿಗೆ ಹಾಗೂ ವಿವಿಧ ಅಧಿಕಾರಿಗಳ ತಂಡ ಸುಮನಹಳ್ಳಿ, ಜ್ಞಾನಭಾರತಿ, ಕೂಡ್ಲು ಮತ್ತು ಹೆಸರುಘಟ್ಟದ ನರ್ಸರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಲ್ಲ ತಂಡಗಳು ನರ್ಸರಿಗಳಲ್ಲಿರುವ ಸಸಿಗಳ ಸ್ಥಿತಿಗತಿಗಳ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಮೇಯರ್ ಪದ್ಮಾವತಿ ಹೇಳಿದರು.