ವ್ಯಾಕರಣ ದೋಷ ‘ಲೈಫ್ 360’

ನಟ ತನ್ನ ಪಾತ್ರದಲ್ಲಷ್ಟೇ ನಟಿಸುತ್ತಾನೆ, ಆದರೆ ನಿರ್ದೇಶಕ ಸಿನೆಮಾದ ಎಲ್ಲರ ಪಾತ್ರಗಳನ್ನೂ ಮಾಡಬೇಕಾಗುತ್ತದೆ! - ಹಿರಿಯ ನಿರ್ದೇಶಕ ಸಿದ್ದಲಿಂಗಯ್ಯನವರ ಮಾತಿದು. ಸಿನೆಮಾದ ಪ್ರತಿಯೊಂದು ವಿಭಾಗಗಳ ಬಗ್ಗೆಯೂ ನಿರ್ದೇಶಕನಿಗೆ ತಿಳುವಳಿಕೆ ಇರಬೇಕಾಗುತ್ತದೆ. ಮಾತ್ರವಲ್ಲ ಕಲಾವಿದರು ಮತ್ತು ತಂತ್ರಜ್ಞರಿಂದ ಕೆಲಸ ತೆಗೆಯುವ ಛಾತಿಯೂ ಬೇಕು. ‘ಲೈಫ್ 360’ ಸಿನೆಮಾದ ನಿರ್ದೇಶಕ ಅರ್ಜುನ್ ಕಿಶೋರ್ ಚಂದ್ರ ಅವರಿಗೆ ಇಂತಹ ಯಾವುದೇ ಗುಣ-ವಿಶೇಷಗಳಿದ್ದಂತಿಲ್ಲ. ಚಿತ್ರದ ನಾಯಕ ನಟನಾಗಿಯೂ ಅವರದ್ದು ನೀರಸ ಆಟ. ತಲೆಯಲ್ಲಿದ್ದ ಕತೆಯನ್ನು ತೆರೆ ಮೇಲೆ ಮೂಡಿಸುವ ಪ್ರಯತ್ನದಲ್ಲಿ ಅವರು ಸಂಪೂರ್ಣ ವಿಫಲರಾಗಿದ್ದಾರೆ.
ಬದುಕಿನ ಬಗ್ಗೆ ನಿರ್ದಿಷ್ಟ ಗುರಿಯಿಲ್ಲದ ಶಿಶಿರ್‌ಗೆ ಆಕಾಂಕ್ಷಳ ಮೇಲೆ ಲವ್ವಾಗುತ್ತದೆ. ಪ್ರೀತಿಯನ್ನು ಒಪ್ಪಿಕೊಂಡ ಆಕಾಂಕ್ಷಳ ಮನಸ್ಸು ಬದಲಾಗಲು ಹೆಚ್ಚು ಸಮಯ ಬೇಕಾಗುವುದಿಲ್ಲ. ಜೀವನದ ಭದ್ರತೆಯ ಕಾರಣಗಳೊಂದಿಗೆ ಆಕೆ ಪ್ರೀತಿಯನ್ನು ಕಡಿದುಕೊಳ್ಳುವುದರೊಂದಿಗೆ ಶಿಶಿರ್ ಒಂಟಿ ಪಯಣ ಶುರುವಾಗುತ್ತದೆ. ಆನಂತರ ಶಿಶಿರ್ ಬದುಕಿಗೆ ಕ್ಯಾಥರಿನ್ ಎನ್ನುವ ಮತ್ತೊಬ್ಬ ಹುಡುಗಿ ಎಂಟ್ರಿ ಕೊಡುತ್ತಾಳೆ. ಆಕೆಯ ಬಗೆಗೂ ಅವನಿಗೆ ಭ್ರಮನಿರಸನವಾಗುತ್ತದೆ. ಸೈಕಲ್ ಮೇಲೆ ಊರು ಸುತ್ತತೊಡಗುವ ಶಿಶಿರ್‌ಗೆ ನಾಲ್ಕು ವ್ಯಕ್ತಿಗಳು ಬದುಕಿನ ವಾಸ್ತವವನ್ನು ಪರಿಚಯಿಸುತ್ತಾರೆ. ತಪ್ಪುಗಳನ್ನು ಸರಿಪಡಿಸಿಕೊಂಡು ಊರಿಗೆ ಮರಳಿ ಬದುಕು ಕಟ್ಟಿಕೊಳ್ಳುವುದರೊಂದಿಗೆ ಸಿನೆಮಾ ಮುಕ್ತಾಯವಾಗುತ್ತದೆ.
ಚಿತ್ರಕಥೆಯ ಹೆಣಿಗೆ ಮತ್ತು ನಿರ್ದೇಶನದಲ್ಲಿ ಅನುಭವದ ಕೊರತೆ ಎದ್ದು ಕಾಣುತ್ತದೆ. ನಿರೂಪಣೆಯಲ್ಲಿಯೇ ಎಡವಟ್ಟಾಗಿರುವುದರಿಂದ ಕ್ಯಾಮರಾ, ಸಂಗೀತದಲ್ಲಿ ಹೊಂದಾಣಿಕೆಯನ್ನು ನಿರೀಕ್ಷಿಸುವಂತಿಲ್ಲ. ನಾಯಕನಟನಾಗಿಯೂ ಅರ್ಜುನ್ ಭರವಸೆ ಮೂಡಿಸುವುದಿಲ್ಲ. ನಟಿಯರಾದ ಅನೂಷ ಮತ್ತು ಪಾಯಲ್ ಓಕೆ. ಉಳಿದಂತೆ ಪೋಷಕ ಪಾತ್ರಗಳಲ್ಲಿ ಶ್ರೀಧರ್, ಸತ್ಯ ಮತ್ತು ಬಿರಾದಾರ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಸಿನೆಮಾ ವ್ಯಾಕರಣ ಕಲಿಯದೆ ಫೀಲ್ಡ್‌ಗೆ ಇಳಿದರೆ ಏನಾಗುತ್ತದೆ ಎನ್ನುವುದಕ್ಕೆ ‘ಲೈಫ್ 360’ ಒಂದೊಳ್ಳೆ ಉದಾಹರಣೆ!
ನಿರ್ದೇಶನ: ಅರ್ಜುನ್ ಕಿಶೋರ್ ಚಂದ್ರ, ನಿರ್ಮಾಣ: ಎಸ್.ರಾಜಶೇಖರ್, ಸಂಗೀತ : ಮಹಾಂತ್ ನೀಲ್, ಆಕಾಶ್ ಶಿವಕುಮಾರ್ ಮತ್ತು ಪ್ರಜ್ವಲ್ ಪೈ, ಛಾಯಾಗ್ರಹಣ: ಅನಿಲ್ ಕುಮಾರ್ ಕೆ., ತಾರಾಗಣ : ಅರ್ಜುನ್ ಕಿಶೋರ್ ಚಂದ್ರ, ಅನೂಷ ರಂಗನಾಥ್, ಪಾಯಲ್ ರಾಧಾಕೃಷ್ಣ, ಹೇಮಂತ್ ಸುಶೀಲ್, ಶ್ರೀಧರ್, ಬಿರಾದಾರ್, ಸರ್ದಾರ್ ಸತ್ಯ ಮತ್ತಿತರರು.
ರೇಟಿಂಗ್ - *1/2
* - ಚೆನ್ನಾಗಿಲ್ಲ, ** - ಸಾಧಾರಣ, *** - ಉತ್ತಮ, **** - ಅತ್ಯುತ್ತಮ







