ಚಿಣ್ಣರ ಮನೆ ತರಗತಿಗೆ ಚಾಲನೆ

ಬಂಟ್ವಾಳ, ಜೂ. 3: ಪುದು ಗ್ರಾಪಂ ವ್ಯಾಪ್ತಿಯ ಫರಂಗಿಪೇಟೆ ಪುದು ಮಾಫ್ಳ ದಕ ಜಿಪಂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚಿಣ್ಣರ ಮನೆ ತರಗತಿಗೆ ಶನಿವಾರ ಚಾಲನೆ ನೀಡಿಲಾಯಿತು.
ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಫರಂಗಿಪೇಟೆಯ ಟುಡೇ ಫೌಂಡೇಶನ್‌ನ ಸಹಕಾರದೊಂದಿಗೆ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಪರ್ಯಾಯವಾಗಿ ಚಿಣ್ಣರಮನೆಯನ್ನು ಆರಂಭಿಸಲಾಗಿದ್ದು ಕನ್ನಡದೊಂದಿಗೆ ಆಂಗ್ಲಭಾಷೆ ಕಲಿಕೆಗೂ ಒತ್ತು ನೀಡಿ 46 ವಿದ್ಯಾಥಿಗಳನ್ನು ಚಿಣ್ಣರಮನೆ ತರಗತಿಗೆ ದಾಖಲಿಸಿಕೊಳ್ಳಲಾಯಿತು.
ಜಿಪಂ ಮಾಜಿ ಸದಸ್ಯ ಉಮರ್ ಫಾರೂಕ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದ ಜೊತೆಗೆ ಆಂಗ್ಲ ಮಧ್ಯಮವನ್ನು ಕಲಿಸುವ ಉದ್ದೇಶದಿಂದ ಶಿಕ್ಷಣ ಇಲಾಖೆಯ ಅನುಮತಿ ಪಡೆದು ಚಿಣ್ಣರ ಮನೆ ತರಗತಿಗಳನ್ನು ಆರಂಭಿಸಲಾಗಿದೆ. ಬಡವರ ಮಕ್ಕಳು ಕೂಡ ಆಂಗ್ಲ ಭಾಷೆ ಕಲಿಯುವ ಕನಸಿಗೆ ಇದು ಪೂರಕವಾಗಲಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಅದೊಷ್ಟೋ ಮಂದಿ ಕಲಿತು ಇಂದು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಲ್ಲಿನ ಹಳೆ ವಿದ್ಯಾರ್ಥಿಗಳೆಲ್ಲ ಸೇರಿಕೊಂಡು ಈ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಪಣತೊಡಬೇಕಾಗಿದೆ ಎಂದರು.
ಎಸ್‌ಡಿಎಂಸಿ ಅಧ್ಯಕ್ಷ ನಾಸೀರ್, ಉದ್ಯಮಿ ಎಫ್. ಇಸಾಕ್ ಹಾಜಿ, ಪುದು ಗ್ರಾಪಂ ಉಪಾಧ್ಯಕ್ಷ ಹಾಶೀರ್ ಪೇರಿಮಾರ್, ಎಫ್.ಎ.ಖಾದರ್, ಸಲೀಂ ಕುಂಪಣ ಮಜಲು, ಫೈರೋರ್, ಅಬೂಬಕ್ಕರ್, ಇಕ್ಬಾಲ್ ಅಮ್ಮೆಮಾರ್, ಮಜೀದ್, ಆಸೀಫ್ ಮೇಲ್ಮನೆ, ಝಾಹೀರ್ ಕುಂಪನ ಮಜಲು, ಸಲೀಂ ಮಲ್ಲಿ, ಪಂಚಾಯತ್ ಸದಸ್ಯರಾದ ರಮ್ಲಾನ್ ಮಾರಿಪಳ್ಳ, ಇಸ್ಮಾಯೀಲ್, ಇಕ್ಬಾಲ್ ಸುಜೀರ್ ವೇದಿಕೆಯಲ್ಲಿ ಹಾಜರಿದ್ದರು. ವಿದ್ಯಾರ್ಥಿಗಳ ಪೋಷಕರು, ಎಸ್‌ಡಿಎಂಸಿ ಸದಸ್ಯರು, ಶಿಕ್ಷಕರು ಹಾಜರಿದ್ದರು.







