ಮೋದಿಯಿಂದಾಗಿ ಸರ್ವಾಧಿಕಾರಿಯಾದ ಭಾರತ: ಜೈರಾಮ್ ರಮೇಶ್

ಕೊಚ್ಚಿ,ಜೂ. 4: ಮೋದಿ ಸರಕಾರದ ಮೂರು ವರ್ಷಗಳ ಆಡಳಿತದಲ್ಲಿ ಪ್ರಜಾಪ್ರಭುತ್ವ ಭಾರತ ಸರ್ವಾಧಿಕಾರದ ಭಾರತವಾಗಿ ಬದಲಾವಣೆಗೊಂಡಿದೆ ಎಂದು ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ಜೈ ರಾಮ್ ರಮೇಶ್ ಹೇಳಿದ್ದಾರೆ. ಕೊಚ್ಚಿಯ ಡಿಡಿಸಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಅವರು ಮಾತಾಡುತ್ತಿದ್ದರು. ಜಾನುವಾರು ಹತ್ಯೆ ನಿಷೇಧ ಕಾನೂನುಗಳ ಹಿಂದೆ ರಾಜಕೀಯ ಉದ್ದೇಶಗಳಿವೆ. ಮೋದಿ ಆಡಳಿತದ ಲಾಭವನ್ನು ಆಸ್ಟ್ರೇಲಿಯ, ಕೆನಡಗಳ ರೈತರು ಪಡೆಯುತ್ತಾರೆ. ಆದರೆ ,ದೇಶದ ರೈತರು ಬಹುದೊಡ್ಡಸಂಕಷ್ಟವನ್ನು ಎದುರಿಸುತ್ತಿದ್ದಾರೆ. ರೈತರಿಗೆ ಬೆಂಬಲ ಬೆಲೆಘೋಷಿಸುವುದಕ್ಕೂ ಸರಕಾರದಿಂದ ಸಾಧ್ಯವಾಗಿಲ್ಲ ಎಂದು ಅವರು ಟೀಕಿಸಿದರು.
ಸರಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳ ನಂತರ ರಬ್ಬರ್ ಮಂಡಳಿಗೆ ಅಧ್ಯಕ್ಷರ ನೇಮಕವಾಯಿತು. ಪ್ರತಿವರ್ಷ ಎರಡು ಕೋಟಿ ಜನರಿಗೆ ಉದ್ಯೋಗ ಎನ್ನುವ ಭರವಸೆ ಮೂಲೆಪಾಲಾಗಿದೆ. ವರ್ಷಕ್ಕೆ ಎರಡು ಲಕ್ಷ ಮಂದಿಗೂ ಕೆಲಸ ನೀಡಲು ಮೋದಿ ಸರಕಾರಕ್ಕೆ ಸಾಧ್ಯವಾಗಿಲ್ಲ ಎಂದರು. ಜಿಡಿಪಿ ಶೇ. 7.5ಕ್ಕೆ ತಲುಪುತ್ತದೆ ಎನ್ನುವ ನಿರೀಕ್ಷೆಯಿತ್ತು. ಆದರೆ ಅದು ಶೇ. 6ರಸುತ್ತಮುತ್ತ ಅಡ್ಡಾಡುತ್ತಿದೆ. ನೋಟು ಅಮಾನ್ಯಗೊಳಿಸಿ ಏಳು ತಿಂಗಳಾಯಿತು. ಬ್ಯಾಂಕಿಗೆ ಎಷ್ಟು ಮರಳಿ ಬಂದಿದೆ ಎನ್ನುವ ಲೆಕ್ಕವನ್ನು ಬಹಿರಂಗಪಡಿಸಿಲ್ಲ. ರಾಜೀವ್ ಗಾಂಧಿ ಸರಕಾರದ ಯೋಜನೆಗಳಿಗೆ ಹೊಸರೂಪ ಕೊಟ್ಟು ಸರಕಾರ ಘೋಷಣೆ ಮಾಡುತ್ತಿದೆ. ಹೆಚ್ಚು ಕೆಲಸ, ಕಡಿಮೆ ಆಡಳಿತ ಎನ್ನುವ ವಾದದೊಂದಿಗೆ ಬಿಜೆಪಿ ಅಧಿಕಾರಕ್ಕೆ ಬಂದಿತ್ತು. ಈಗ ಕಡಿಮೆ ಕೆಲಸ ಹೆಚ್ಚು ಪ್ರಚಾರ ಎನ್ನುವಂತಾಗಿದೆ ಎಂದು ಜೈರಾಂ ರಮೇಶ್ ವ್ಯಂಗ್ಯವಾಡಿದರು.
ಭ್ರಷ್ಟಾಚಾರ ಇಲ್ಲದಾಗಿಸಿದ್ದೇವೆ ಎಂದು ಪ್ರಚಾರಮಾಡುವಾಗಲೂ ದೊಡ್ಡ ಹಗರಣಗಳತನಿಖೆಗೆ ಸರಕಾರ ಹಿಂದೇಟು ಹಾಕುತ್ತಿದೆ. ಲಲಿತ್ ಮೋದಿ, ಮಧ್ಯಪ್ರದೇಶದ ವ್ಯಾಪಂ, ಮಧ್ಯಪ್ರದೇಶದ ಅನಿಲ ಯೋಜನೆ, ಛತ್ತೀಸ್‌ಗಡ ಮುಖ್ಯಮಂತ್ರಿ ಪುತ್ರನ ಹೆಸರು ಪನಾಮ ಲಿಸ್ಟ್‌ನಲ್ಲಿರುವುದು ಇವು ನಿಗೂಢವಾಗಿಯೇ ಉಳಿದಿವೆ.
ವ್ಯಾಪಂ, ಲಲಿತ್ ಮೋದಿ ವಿಷಯಗಳಂತಹ ಅನೇಕ ಹಗರಣಗಳನ್ನು ಜನರಿಗೆ ಅಡಗಿಸಿಡಲಾಗಿದೆ. ಯುಪಿಎ ಸರಕಾರದ ಕೊನೆಯ ಎರಡುವರ್ಷದಲ್ಲಿ 1,35,000 ಕೋಟಿ ರೂಪಾಯಿ ಕಪ್ಪುಹಣ ವಶಪಡಿಸಿತ್ತು. ಆದರೆ ಬಿಜೆಪಿ ಸರಕಾರಕ್ಕೆ 25,000 ಕೋಟಿ ರೂಪಾಯಿ ಕಪ್ಪು ಹಣವನ್ನು ವಶಪಡಿಸಿಕೊಳ್ಳಲು ಸಾಧ್ಯವಾಗಿದೆ. ಪ್ರತಿಪಕ್ಷ ಮೌನಕ್ಕೆ ಶರಣಾಗಿದೆ ಎನ್ನುವ ಪ್ರಚಾರ ಸರಿಯಲ್ಲ. ಮೋದಿ ಸರಕಾರದ ವಿರುದ್ಧ ಎದ್ದಿರುವ ಜನರ ಆಕ್ರೋಶದೊಂದಿಗೆಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆಕಾರ್ಯಕ್ರಮಗಳನ್ನು ಆಯೋಜಿಸಲಿದೆ ಎಂದು ಜೈರಾಂ ರಮೇಶ್ ತಿಳಿಸಿದ್ದಾರೆ.







