ಕಾಪು ಪುರಸಭೆ ವರ್ಷಾಚರಣೆ ಸಂಭ್ರಮ

ಕಾಪು. ಜೂನ್, 4 : ಕಾಪು ಪುರಸಭೆ ರಚನೆಯಾಗಿ ಒಂದು ವರ್ಷದ ಅವಧಿಯಲ್ಲಿ ಸರ್ಕಾರದಿಂದ ಬಿಡುಗಡೆಯಾದ ವಿವಿಧ ಅನುದಾನಗಳನ್ನು ಬಳಸಿಕೊಂಡು ಸುಮಾರು ರೂ. 38 ಕೋಟಿ ವೆಚ್ಚದ ವಿವಿಧ ಯೋಜನೆಯನ್ನು ಅನುಷ್ಟಾನಗೊಳಿಸಲಾಗಿದೆ ಎಂದು ಕಾಪು ಪುರಸಭಾ ಅಧ್ಯಕ್ಷೆ ಸೌಮ್ಯ ಹೇಳಿದರು.
ಕಾಪು ಪುರಸಭಾ ಸಭಾಂಗಣದಲ್ಲಿ ಶನಿವಾರ ನಡೆದ ವರ್ಷಾಚರಣೆ ಸಂಭ್ರಮದಲ್ಲಿ ಮಾತನಾಡಿದ ಅವರು, 14 ನೇ ಹಣಕಾಸು ಯೋಜನೆಯಡಿ ಸಕ್ಕಿಂಗ್ ಯಂತ್ರ ಖರೀದಿಸಲು ತೀರ್ಮಾನಿಸಲಾಗಿದೆ. ಮನೆ-ಮನೆಯಲ್ಲಿ ಕಸ ಬೇರ್ಪಡಿಸಿ ಸಂಗ್ರಹಣೆ ಮಾಡಲು ಬಕೆಟ್‌ಗಳನ್ನು ವಿತರಿಸಲಾಗುವುದು. ಪುರಸಭಾ ವ್ಯಾಪ್ತಿಯ ರಸ್ತೆಗಳಿಗೆ ಪಾದಾಚಾರಿ ಮಾರ್ಗ ನಿರ್ಮಾಣ, ಮಳೆ ನೀರು ಚರಂಡಿ ರಚನೆ, ಸಮಗ್ರ ನೀರು ಸರಬರಾಜು ಯೋಜನೆಯಲ್ಲಿ ರೂ. 70 ಕೋಟಿ ಮೀಸಲಿರಿಸಲಾಗಿದೆ ಎಂದು ಹೇಳಿದರು.
ಕಳೆದ ಒಂದು ವರ್ಷದ ಅವಧಿಯಲ್ಲಿ ಜನರ ಸಮಸ್ಯೆಗಳನ್ನು ಪರಿಹರಿಸಲು ದೂರು ನೀಡಲು ಆನ್‌ಲೈನ್ ತಂತ್ರಾಂಶವನ್ನು ಅಳವಡಿಸಿಕೊಳ್ಳಲಾಗಿದೆ, ಪುರಸಭಾ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದ್ದು, ಬಟ್ಟೆ ಚೀಲಗಳನ್ನು ವಿತರಿಸಲಾಗಿದೆ. ಹಸಿ ಹಾಗೂ ಒಣ ಕಸವನ್ನು ವಿಂಗಡಿಸಿ ಮನೆ ಮನೆಯಿಂದ ಸಂಗ್ರಹಿಸಲಾಗುತ್ತಿದೆ ಎಂದರು.
ದ್ವಿಪಥ ರಸ್ತೆ ಯೋಜನೆ: ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಕಾಪು ಪುರಸಭ ವ್ಯಾಪ್ತಿಯ ಪ್ರಮುಖ ರಸ್ತೆಗಳನ್ನು ದ್ವಿಪಥಗೊಳಿಸಲಾಗುವುದು. ಹಸಿರೀಕರಣ, ಸಂಪರ್ಕ ರಸ್ತೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಪುರಸಭಾ ವ್ಯಾಪ್ತಿಯಲ್ಲಿ ಸಮಗ್ರ ಒಳಚರಂಡಿ ಯೋಜನೆಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ. ಕೊಳಚೆ ನೀರಿನ ಸಂಸ್ಕರಣಾ ಘಟಕ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು, ಶೀಘ್ರ ಕಾಮಗಾರಿ ಆರಂಭಿಸಲಾಗುವುದು ಎಂದರು.
ಹೊಸದಾಗಿ ರಚನೆಯಾಗಿರುವ ಪುರಸಭೆಯಲ್ಲಿ ಪ್ರಥಮ ಸ್ಥಾನದಲ್ಲಿರುವ ಕಾಪು ಪುರಸಭೆ ಈ ವರ್ಷ ಸುಮಾರು ರೂ. ಒಂದು ಕೋಟಿ ತೆರಿಗೆ ಸಂಗ್ರಹ ಮಾಡಿದೆ. ಹಿಂದೆ ಗ್ರಾಮ ಪಂಚಾಯ್ತಿ ಆಗಿದ್ದಾಗ ರೂ. 50 ಲಕ್ಷ ತೆರಿಗೆ ಸಂಗ್ರಹವಾಗಿತ್ತು ಎಂದರು.







